ಚಂಡೀಗಢ: ರಾಜ್ಯದಲ್ಲಿ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವ ಶಾಸನವನ್ನು ಜಾರಿಗೊಳಿಸುವ ಬಗ್ಗೆ ಹಿಮಾಚಲ ಪ್ರದೇಶ ಸರಕಾರವು ಪರಿಶೀಲಿಸುತ್ತಿದೆ ಎಂದು ಮುಖ್ಯಮಂತ್ರಿ ಸುಖವೀಂದರ್ ಸಿಂಗ್ ಸುಖು ತಿಳಿಸಿದ್ದಾರೆ.
ಚಂಡೀಗಢದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,'' ರಾಜ್ಯಕ್ಕೆ ಆದಾಯವನ್ನು ಸೃಷ್ಟಿಸುವಲ್ಲಿ ಗಾಂಜಾ ಕೃಷಿಯು ಗಣನೀಯವಾದ ಪಾತ್ರವನ್ನು ವಹಿಸಲಿದೆ. ಅಲ್ಲದೆ ಅದರಲ್ಲಿ ಹಲವಾರು ಔಷದೀಯ ಸತ್ವಗಳಿರುವುದರಿಂದ ರೋಗಿಗಳಿಗೂ ಇದರಿಂದ ಪ್ರಯೋಜನವಾಗಲಿದೆ'' ಎಂದವರು ಹೇಳಿದರು.
ಗಾಂಜಾ ಕೃಷಿಯನ್ನು ಸಕ್ರಮಗೊಳಿಸುವುದರಿಂದ ಮಾದಕದ್ರವ್ಯ ಸೇವನೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿರುವುದರಿಂದ ಈ ವಿಚಾರವಾಗಿ ಸರಕಾರವು ಎಚ್ಚರಿಕೆಯಿಂದ ಹೆಜ್ಜೆಯಿಡಲಿದೆ. ಗಾಂಜಾ ಕೃಷಿಗೆ ಸಂಬಂಧಿಸಿದ ಎಲ್ಲಾ ಅಂಶಗಳ ಬಗ್ಗೆ ಅಧ್ಯಯನ ನಡೆಸಲು ಐದು ಮಂದಿ ಶಾಸಕರ ಸಮಿತಿಯೊಂದನ್ನು ರಚಿಸಲಾಗುವುದು ಹಾಗೂ ಅದು ತಿಂಗಳೊಳಗೆ ವರದಿಯನ್ನು ಸಲ್ಲಿಸಲಿದೆ ಎಂದು ಸುಖು ತಿಳಿಸಿದರು.
ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿರುವ ದೇಶದ ಪ್ರಥಮ ರಾಜ್ಯವೇನಲ್ಲ ಎಂದವರು ಸ್ಪಷ್ಟಪಡಿಸಿದರು. ನೆರೆಯ ರಾಜ್ಯವಾದ ಉತ್ತರಾಖಂಡವು 2017ರಲ್ಲಿ ಗಾಂಜಾ ಕೃಷಿಯನ್ನು ಸಕ್ರಮಗೊಳಿಸಿದ ದೇಶದ ಪ್ರಪ್ರಥಮ ರಾಜ್ಯವಾಗಿದೆ. ಗುಜರಾತ್, ಮಧ್ಯಪ್ರದೇಶ ಹ ಆಗೂ ಉತ್ತರಪ್ರದೇಶದ ಕೆಲವು ಜಿಲ್ಲೆಗಳಲ್ಲಿಯೂ ಗಾಂಜಾವನ್ನು ನಿಯಂತ್ರಿತವಾಗಿ ಬೆಳೆಸಲಾಗುತ್ತಿದೆ ಎಂದು ಸುಖ್ ಅವರು ತಿಳಿಸಿದರು.