ಬದಿಯಡ್ಕ: ಕುಂಬ್ಡಾಜೆ ಕಜಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯಗಳ ಅಂಗವಾಗಿ ಬುಧವಾರ ನೂತನ ಗರ್ಭಗುಡಿಗೆ ಹಾಗೂ ನಮಸ್ಕಾರ ಮಂಟಪಕ್ಕೆ ಶಿಲಾನ್ಯಾಸ ಕಾರ್ಯ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರು ಬೆಳಗ್ಗೆ 7.30ರ ಶುಭಮುಹೂರ್ತದಲ್ಲಿ ಪೂಜಾದಿ ವಿಗಳನ್ನು ನೆರವೇರಿಸಿಕೊಟ್ಟರು. ಶಿಲ್ಪಿ ಸುಧಾಕರ ಆಚಾರ್ಯ ಚಾರ್ಮಾಡಿ, ಕೃಷ್ಣಪ್ರಸಾದ್ ಬಂಟ್ವಾಳ ಉಪಸ್ಥಿತರಿದ್ದು ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಊರಪರವೂರ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗೆ ಎಡನೀರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಅನುಜ್ಞಾಕಲಶ, ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಕಾರ್ಯ ನಡೆದಿತ್ತು. ಒಂದು ವರ್ಷದೊಳಗೆ ಬ್ರಹ್ಮಕಲಶೋತ್ಸವವನ್ನು ನೆರವೇರಿಸುವುದಾಗಿ ಶ್ರೀ ದೇವರಲ್ಲಿ ಪ್ರಾರ್ಥಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದೆ.