ನವದೆಹಲಿ: 'ಸರ್ಕಾರದ ನೀತಿಗಳ ವಿರುದ್ಧ ಸುದ್ದಿವಾಹಿನಿ ಮಾಡಿರುವ ಕಟು ವಿಮರ್ಶೆಯನ್ನು ಆಡಳಿತ ವಿರೋಧಿ ಎಂದು ಕರೆಯಲಾಗದು. ಸದೃಢ ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ಮಾಧ್ಯಮದ ಅಗತ್ಯವಿದೆ' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡಿದ ಆರೋಪದಡಿ ಕೇಂದ್ರ ಸರ್ಕಾರವು ಕೇರಳದ 'ಮೀಡಿಯಾ ಒನ್' ಮಲಯಾಳ ಸುದ್ದಿ ವಾಹಿನಿಯ ಪ್ರಸಾರದ ಮೇಲೆ ನಿರ್ಬಂಧ ಹೇರಿತ್ತು. ಈ ತೀರ್ಮಾನವನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುದ್ದಿ ವಾಹಿನಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಬುಧವಾರ ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ನ್ಯಾಯಪೀಠವು ಹೈಕೋರ್ಟ್ ಆದೇಶ ರದ್ದುಪಡಿಸಿದೆ.
'ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡಿದ್ದಾಗಿ ಸುಮ್ಮನೇ ಆರೋಪಿಸುವಂತಿಲ್ಲ. ಅದನ್ನು ಸಾಬೀತುಪಡಿಸುವುದಕ್ಕೆ ಅಗತ್ಯ ಸಾಕ್ಷ್ಯಾಧಾರಗಳು ಇರಲೇಬೇಕಾಗುತ್ತದೆ' ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಗೃಹ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.
'ನಾಗರಿಕರನ್ನು ಜಾಗೃತರನ್ನಾಗಿಸುವ ಸಲುವಾಗಿ, ಪ್ರಜಾಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಇರುವ ಆಯ್ಕೆಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಅವರಿಗೆ ಸತ್ಯ ಹೇಳಬೇಕಿರುವುದು ಮಾಧ್ಯಮದ ಕರ್ತವ್ಯ. ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧವು ನಾಗರಿಕರನ್ನೂ ಅದೇ ನೆಲೆಯಲ್ಲಿ ಯೋಚಿಸುವಂತೆ ಮಾಡುತ್ತದೆ' ಎಂದು ನ್ಯಾಯಪೀಠ ತಿಳಿಸಿದೆ.
'ಸಾಮಾಜಿಕ ಆರ್ಥಿಕ ರಾಜಕೀಯದಿಂದ ಹಿಡಿದು ರಾಜಕೀಯ ಸಿದ್ಧಾಂತದವರೆಗೆ ಇರುವ ಸಮಸ್ಯೆಗಳ ಕುರಿತಾದ ಏಕರೂಪದ ದೃಷ್ಟಿಕೋನವು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ತಂದೊಡ್ಡಲಿದೆ. ಸುದ್ದಿ ವಾಹಿನಿಯ ಪರವಾನಗಿಯನ್ನು ನವೀಕರಿಸದೇ ಇರುವುದು ವಾಕ್ ಸ್ವಾತಂತ್ರ್ಯದ ಹಕ್ಕಿನ ಮೇಲಿನ ನಿರ್ಬಂಧ ಎನಿಸಲಿದೆ' ಎಂದು ಅಭಿಪ್ರಾಯಪಟ್ಟಿದೆ.
'ವಾಹಿನಿಯ ಷೇರುದಾರರಿಗೂ ಜಮಾತೆ-ಇ-ಇಸ್ಲಾಂ ಹಿಂದ್ ಸಂಘಟನೆಗೂ ಇರುವ ನಂಟಿನ ಕುರಿತಾದ ಆರೋಪದ ಆಧಾರದಲ್ಲಿ ಸುದ್ದಿವಾಹಿನಿಯ ಹಕ್ಕನ್ನು ನಿರ್ಬಂಧಿಸಲು ಆಗುವುದಿಲ್ಲ. ಕಾನೂನಿನ ಅಡಿಯಲ್ಲಿ ನೀಡಲಾಗಿರುವ ನಾಗರಿಕರ ಪರಿಹಾರ ಕ್ರಮಗಳನ್ನು ನಿರಾಕರಿಸುವುದಕ್ಕಾಗಿ ಸರ್ಕಾರವು ರಾಷ್ಟ್ರೀಯ ಭದ್ರತೆಯನ್ನು ಅಸ್ತ್ರವಾಗಿ ಪ್ರಯೋಗಿಸುತ್ತಿದೆ' ಎಂದು ಹೇಳಿದೆ.
'ಮುಚ್ಚಿದ ಲಕೋಟೆ ಸಂಸ್ಕೃತಿಯು ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಲಿದೆ' ಎಂದೂ ತಿಳಿಸಿದೆ.