ನವದೆಹಲಿ: ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದಂತೆ ಒಟ್ಟು 14 ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
'ಪ್ರಕರಣವೊಂದರ ವಾಸ್ತವಾಂಶಕ್ಕೆ ಸಂಬಂಧವೇ ಇಲ್ಲದಂತಹ ಮಾರ್ಗಸೂಚಿಗಳನ್ನು ಪ್ರಕಟಿಸುವುದು ಅಪಾಯಕಾರಿ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಿರೋಧ ಪಕ್ಷಗಳ ಪರವಾಗಿ ನ್ಯಾಯಪೀಠದ ಎದುರು ಹಾಜರಾಗಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಅರ್ಜಿ ಹಿಂಪಡೆಯಲು ಅನುಮತಿ ನೀಡುವಂತೆ ಕೋರಿದರು.
'ಈ ಹಂತದಲ್ಲಿ ಅರ್ಜಿ ಹಿಂಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಹೀಗಾಗಿ ಇದನ್ನು ವಜಾಗೊಳಿಸಲಾಗುತ್ತಿದೆ' ಎಂದು ನ್ಯಾಯಪೀಠ ಹೇಳಿತು.
'ವೈಯಕ್ತಿಕ ಅಥವಾ ಸಾಮೂಹಿಕವಾಗಿ ಕ್ರಿಮಿನಲ್ ದಾವೆ ಹೂಡುವ ಸಂದರ್ಭ ಎದುರಾದಾಗ ನೀವು ಮತ್ತೆ ನಮ್ಮ ಬಳಿಗೆ ಬನ್ನಿ' ಎಂದು ನ್ಯಾಯಪೀಠವು ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು.
ಕಾಂಗ್ರೆಸ್, ಡಿಎಂಕೆ, ಆರ್‌ಜೆಡಿ, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಕ್ಷ (ಎಎಪಿ), ಎನ್‌ಸಿಪಿ, ಶಿವಸೇನಾ (ಉದ್ಧವ್ ಠಾಕ್ರೆ ಬಣ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಜೆಡಿಯು, ಸಿಪಿಎಂ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಸಮಾಜವಾದಿ ಪಕ್ಷ ಹಾಗೂ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಅರ್ಜಿ ಸಲ್ಲಿಸಿದ್ದವು. ಭವಿಷ್ಯದಲ್ಲಿ ಇಂತಹ ದುರ್ಬಳಕೆ ತಡೆಯುವ ಸಲುವಾಗಿ ಮಾರ್ಗಸೂಚಿಗಳನ್ನು ರಚಿಸುವಂತೆಯೂ ಕೋರಿದ್ದವು.