ಚೆಂಗನ್ನೂರು: ತಾಯಿಯಿಂದ ತ್ಯಜಿಸಲ್ಪಟ್ಟ ನವಜಾತ ಶಿಶುವನ್ನು ಕೇರಳ ಪೊಲೀಸರು ಮಂಗಳವಾರ ರಕ್ಷಣೆ ಮಾಡಿದ್ದಾರೆ. ಮಗುವನ್ನು ಬಕೆಟ್‌ನಲ್ಲಿ ಇಟ್ಟು ತಾಯಿ ಪರಾರಿಯಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಡಿಎನ್ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ಸದ್ಯಕ್ಕೆ ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಮಕ್ಕಳ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು ಐಪಿಸಿ 317 ಸೆಕ್ಷನ್ ಅಡಿಯಲ್ಲಿ ಮಗುವಿನ ತಾಯಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಪೊಲೀಸರು ಮಹಿಳೆ ಮತ್ತು ಆಕೆಯ ಬೇರ್ಪಟ್ಟ ಪತಿಯ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.
ಹೆರಿಗೆ ನಂತರ ಪ್ರಾಥಮಿಕ ಚಿಕಿತ್ಸೆ ದೊರೆಯದೇ ಆರೋಗ್ಯ ಸಮಸ್ಯೆಯಿಂದ ಮಗು ಬಳಲುತ್ತಿದೆ. 24 ಗಂಟೆಗಳ ಕಾಲ ಮಗುವನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದು, ಆ ಬಳಿಕ ಮಗುವಿನ ಸ್ಥಿತಿಯನ್ನು ತಿಳಿಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
32 ವಾರದ ಮಗು ಕೇವಲ 1.3 ಗ್ರಾಂ ತೂಕವಿದೆ. ಈ ಸಮಯದಲ್ಲಿ ಆರೋಗ್ಯಯುತ ಮಗುವಿನ ತೂಕ 2.7 ಕೆಜಿ ಇರಬೇಕು. ಸದ್ಯ ಮಗುವಿಗೆ ಕಾಮಾಲೆ ಸೇರಿದಂತೆ ರೋಗಗಳನ್ನು ತಡೆಗಟ್ಟುವ ಆರೈಕೆಯನ್ನು ನೀಡಲಾಗುತ್ತಿದೆ.
ಅರನ್ಮುಳ ಮೂಲದ ಮಹಿಳೆ ಕೊಟ್ಟಾದಲ್ಲಿನ ತನ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಅತಿಯಾದ ರಕ್ತಸ್ರಾವದಿಂದ ಸ್ಥಳೀಯ ಆಸ್ಪತ್ರೆಗೆ ಬಂದಳು. ಇದಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಮಗುವಿನ ಬಗ್ಗೆ ಪ್ರಶ್ನಿಸಿದಾಗ ಆಕೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ ಮತ್ತು ಹೆರಿಗೆಯ ಸಮಯದಲ್ಲಿ ಮಗು ಸಾವನ್ನಪ್ಪಿದೆ ಎಂದು ಹೇಳಿದಳು. ಆದರೆ ಆಕೆಯ ಹಿರಿಯ ಮಗ ಮಗುವಿನ ಅಸಲಿ ಸ್ಥಿತಿಯನ್ನು ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಇದಾದ ಬಳಿಕ ಚೆಂಗನ್ನೂರು ಪೊಲೀಸರು ಮಹಿಳೆಯ ಮನೆಯನ್ನು ಪರಿಶೀಲಿಸಿದಾಗ, ಮನೆಯ ಹೊರಗಿನ ಸ್ನಾನಗೃಹದ ಒಳಗೆ ಬಕೆಟ್‌ನಲ್ಲಿ ಗಂಡು ಮಗುವನ್ನು ಬಟ್ಟೆಯಿಂದ ಮುಚ್ಚಿರುವುದು ಕಂಡುಬಂದಿದೆ. ತಕ್ಷಣ ಮಗುವನ್ನು ತಮ್ಮ ವಶಕ್ಕೆ ಪಡೆದು ಪೊಲೀಸರು ನವಜಾತ ಶಿಶುವನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಗುವಿಗೆ ಚಿಕಿತ್ಸೆ ಮುಂದುವರಿದಿದೆ. ತಾಯಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.