ನವದೆಹಲಿ: ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಯನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ ಎಂದು ವರದಿಯಾಗಿದೆ.
ಹಿಂದಿ ದೈನಿಕ ದೈನಿಕ್ ಭಾಸ್ಕರ್ ಈ ಬಗ್ಗೆ ವರದಿ ಮಾಡಿದೆ. ಈ ಬಗ್ಗೆ ಪತ್ರಕರ್ತ ಸಚಿನ್ ಗುಪ್ತಾ ಮತ್ತು ಐಎಎನ್‍ಎಸ್ ಸಹಾಯಕ ಸಂಪಾದಕ ಅತುಲ್ ಕ್ರಿಶನ್ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಬುಲಂದ್‍ಶಹರ್ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಸ್ಬಾ ಸಿಯಾನಾ ಪ್ರದೇಶದಿಂದ ಉತ್ತರ ಪ್ರದೇಶದ ಎಟಿಎಸ್ ತಂಡ ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ದೈನಿಕ್ ಭಾಸ್ಕರ್ ವರದಿ ಪ್ರಕಾರ ಸೈಫಿ 10ನೇ ತರಗತಿ ಪಾಸಾಗಿರುವವನಾಗಿದ್ದು, ಸುಮಾರು 8 ವರ್ಷಗಳಿಂದ ಮರಗೆಲಸ ನಡೆಸುವವನು. ಆತನಿಗೆ ನಾಲ್ವರು ಸಹೋದರರಿದ್ದಾರೆ, ಅವರಲ್ಲಿ 2 ಮಂದಿ ಘಾಜಿಯಾಬಾದ್‍ನಲ್ಲಿ ಮತ್ತು 2 ಮಂದಿ ಬುಲಂದ್‍ಶಹರ್‍ನಲ್ಲಿ ವಾಸಿಸುತ್ತಿದ್ದಾರೆ. ಸೈಫೀ ಮತ್ತು ಒಡಹುಟ್ಟಿದವರು ಮರಗೆಲಸದಲ್ಲಿ ತೊಡಗಿಸಿಕೊಂಡವರು. ಸಾಮಾನ್ಯವಾಗಿ ಕೆಲಸದ ನಿಮಿತ್ತ ದೆಹಲಿಗೆ ಹೋಗುತ್ತಾರೆ. ಆದರೆ ಸೈಫಿ ಕೇರಳ ತಲುಪಿದ್ದು ಹೇಗೆ ಎಂಬುದು ಗೊತ್ತಿಲ್ಲ ಎಂದು ಆರೋಪಿಯ ಸಂಬಂಧಿಕರು ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‍ಐಎ) ನಾಲ್ವರು ಸದಸ್ಯರ ತಂಡ ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಘಟನೆಗೆ ಭಯೋತ್ಪಾದಕ ಸಂಪರ್ಕವಿದೆ ಎಂದು ಗುಂಪು ಶಂಕಿಸಿದೆ. ಆದರೆ, ಅಧಿಕೃತವಾಗಿ ತನಿಖೆ ಕೈಗೆತ್ತಿಕೊಂಡಿಲ್ಲ.
ಘಟನೆಯ ನಂತರ, ಕೋಝಿಕ್ಕೋಡ್‍ನ ಏಲತ್ತೂರ್ ರೈಲು ನಿಲ್ದಾಣದ ಬಳಿಯ ಹಳಿಯಲ್ಲಿ ಒಂದು ವರ್ಷದ ಮಗು ಮತ್ತು ಮಹಿಳೆ ಸೇರಿದಂತೆ ಮೂವರ ಶವಗಳನ್ನು ಪೊಲೀಸರು ಪತ್ತೆ ಮಾಡಿದರು. ಆರೋಪಿಗೆ ಸೇರಿದ್ದೆಂದು ಶಂಕಿಸಲಾದ ಚೀಲವನ್ನು ಸಹ ಪೆÇಲೀಸರು ವಶಪಡಿಸಿಕೊಂಡಿದ್ದರು. ಇದರಿಂದ ಲಭ್ಯವಾದ ಮಾಹಿತಿ ಆರೋಪಿಯ ಸುಳಿವು ನೀಡುವಲ್ಲಿ ನೆರವಾಯಿತೆನ್ನಲಾಗಿದೆ. ಕೇರಳದ ಪೊಲೀಸ್ ತಂಡವೂ ನೋಯ್ಡಾ ಸೇರಿದಂತೆ ಪ್ರದೇಶಗಳಲ್ಲಿ ಶೋಧ ನಡೆಸುತ್ತಿದೆ.
ರೈಲಲ್ಲಿ ದಾಳಿ ಘಟನೆ: ಶಾರುಖ್ ಸೈಫಿ ಬಂಧನ: ವರದಿ: ಬುಲಂದ್‍ಶಹರ್‍ನಲ್ಲಿ ತಲೆಮರೆಸಿಕೊಂಡಿದ್ದ ಸೈಫಿಯನ್ನು ಬಂಧಿಸಿದ ಯುಪಿ ಎಟಿಎಸ್
0
ಏಪ್ರಿಲ್ 04, 2023