ನವದೆಹಲಿ: ಕ್ರಿಶ್ಚಿಯನ್ ಸಂಸ್ಥೆಗಳ ಹಾಗೂ ಪಾದ್ರಿಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಕಿ-ಅಂಶಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.
ಅರ್ಜಿದಾರರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ವಿದೇಶದಲ್ಲಿ ಭಾರತದ ಗೌರವಕ್ಕೆ ಕುಂದು ತರಲು ಬಯಸಿದ್ದಾರೆ ಎಂದು ಕೇಂದ್ರ ಆರೋಪಿಸಿದೆ.
ಕ್ರಿಶ್ಚಿಯನ್ ಸಮುದಾಯದ ಮೇಲೆ ಹಿಂಸಾಚಾರ ನಡೆಯುತ್ತಿದೆ ಎಂದು ಆರೋಪಿಸಿ ನ್ಯಾಷನಲ್ ಸಾಲಿಡಾರಿಟಿ ಫೋರಂನ ರೆವೆರೆಂಡ್ ಪೀಟರ್ ಮಚಾಡೊ ಹಾಗೂ ಇವನ್‌ಗೆಲಿಕಲ್ ಫೆಲೊಶಿಪ್ ಆಫ್ ಇಂಡಿಯಾದ ರೆವೆರೆಂಡ್ ವಿಜಯೇಶ್ ಲಾಲ್ ಮತ್ತು ಇತರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪಾರ್ದೀವಾಲ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. 'ಅರ್ಜಿಯಲ್ಲಿ ನೀಡಿರುವ ಅಂಕಿ ಅಂಶಗಳು ತಪ್ಪು ಮಾಹಿತಿಯಿಂದ ಕೂಡಿವೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ನ್ಯಾಯಾಲಯಕ್ಕೆ ತಿಳಿಸಿದರು.
'2021ರಿಂದ 2022 ಮೇ ತಿಂಗಳಿನವರೆಗೂ ಕ್ರಿಶ್ಚಿಯನ್ ಸಮುದಾಯದ ಮೇಲೆ 700 ಹಿಂಸಾಚಾರ ಪ್ರಕರಣಗಳು ನಡೆದಿವೆ. ಈ ಎಲ್ಲಾ ಪ್ರಕರಣಗಳಲ್ಲಿ ಕ್ರಿಶ್ಚಿಯನ್ ಸಮುದಾಯದವರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಸಲಾಗಿದೆ' ಎಂದು ಅರ್ಜಿದಾರರು ಮುಖ್ಯ ನ್ಯಾಯಮೂರ್ತಿ ಅವರಿಗೆ ತಿಳಿಸಿದರು.
ಈ ವಾದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ, 'ಕ್ರಿಶ್ಚಿಯನ್ ಸಮುದಾಯದ ಮೇಲೆ ಹಿಂಸಾಚಾರ ನಡೆದಿರುವ ಬಗ್ಗೆ ಕೆಲವು ರಾಜ್ಯಗಳಿಂದ ವರದಿ ತರಿಸಿಕೊಳ್ಳಲಾಗಿದೆ. ಅರ್ಜಿಯಲ್ಲಿ ಉಲ್ಲೇಖಿಸಲಾದ ಹೆಚ್ಚಿನ ಘಟನೆಗಳು ಹಿಂಸಾಚಾರವಾಗಿರಲಿಲ್ಲ. ಅವೆಲ್ಲವೂ ನೆರೆಹೊರೆಯವರ ನಡುವಣ ಜಗಳಗಳಾಗಿದ್ದವು. ಇಂಥ ಜಗಳಗಳಲ್ಲಿ ಒಂದು ಕಡೆಯವರು ಕ್ರಿಶ್ಚಿಯನ್ನರೇ ಆಗಿದ್ದರು ಎನ್ನುವುದು ಕಾಕತಾಳೀಯ ಮಾತ್ರ' ಎಂದು ವಾದಿಸಿತು.
'ಕ್ರಿಶ್ಚಿಯನ್ನರ ಮೇಲೆಯೇ ದಾಳಿಗಳಾದ ಸುಮಾರು 500 ಪ್ರಕರಣಗಳಿವೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಈ ಎಲ್ಲದರ ಬಗ್ಗೆ ನಾವು ಆಯಾ ರಾಜ್ಯ ಸರ್ಕಾರಗಳಿಂದ ಮಾಹಿತಿ ಪಡೆದಿದ್ದೇವೆ. ಬಿಹಾರದಲ್ಲಿ ನಡೆದ ಘಟನೆಗಳನ್ನೇ ನೋಡೋಣ. ಈ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಯಾವ ಘಟನೆಗಳ ಬಗ್ಗೆ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೊ ಅವೆಲ್ಲವೂ ನೆರೆಹೊರೆಯವರ ಜಗಳಗಳಾಗಿವೆ. ಬಿಹಾರದಲ್ಲಿ ಒಟ್ಟು 38 ಇಂಥ ಜಗಳಗಳು ನಡೆದಿವೆ' ಎಂದು ಕೇಂದ್ರ ವಾದಿಸಿತು.
'ಅಂತೆಯೇ, ಛತ್ತೀಸಗಢದಲ್ಲಿ ಕ್ರಿಶ್ಚಿಯನ್ನರ ಹಾಗೂ ಕ್ರಿಶ್ಚಿಯನ್ ಸಂಸ್ಥೆಗಳ ಮೇಲೆ 495 ದಾಳಿಗಳಾಗಿವೆ ಎಂದು ಅರ್ಜಿದಾರರು ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ಅಂಥ ಯಾವುದೇ ಘಟನೆಗಳು ನಡೆದಿಲ್ಲ' ಎಂದು ಕೇಂದ್ರ ನ್ಯಾಯಾಲಯಕ್ಕೆ ತಿಳಿಸಿತು.
ಅರ್ಜಿದಾರರ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ಸಲ್ಲಿಸಿದ ವರದಿಯನ್ನು ನ್ಯಾಯಾಲಯವು ಪರಿಗಣಿಸಿತು. ಕೇಂದ್ರ ಗೃಹ ಸಚಿವಾಲಯವು ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಕರ್ನಾಟಕ, ಒಡಿಸಾ, ಛತ್ತೀಸಗಢ, ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳಿಂದ ವರದಿ ತರಿಸಿಕೊಂಡಿತ್ತು. ಕೇಂದ್ರದ ವರದಿಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯವು ಮೂರು ವಾರಗಳ ಕಾಲಾವಕಾಶ ನೀಡಿತು. ಕೋಲಿನ್ ಗೋನ್ಸಾಲ್ವಿಸ್ ಅರ್ಜಿದಾರರ ಪರ ವಾದ ಮಂಡಿಸಿದರು.
ನ್ಯಾಯಾಲಯ ಹೇಳಿದ್ದು
ವ್ಯಕ್ತಿಯೊಬ್ಬನ
ಮೇಲೆ ನಡೆದ ಹಿಂಸೆಯು ಒಂದು ಸಮುದಾಯದ ಮೇಲೆ ನಡೆದ ಹಿಂಸೆ ಎನ್ನುವುದಕ್ಕೆ ಸಾಧ್ಯವಿಲ್ಲ.
ಆದರೆ, ಅರ್ಜಿದಾರರು ಹೇಳಿರುವ ಪ್ರಕರಣಗಳಲ್ಲಿ ಶೇ 10ರಷ್ಟು ಪ್ರಕರಣಗಳಲ್ಲಾದರೂ
ಸತ್ಯಾಂಶ ಇದ್ದರೆ, ಈ ಎಲ್ಲ ಪ್ರಕರಣಗಳ ಬಗ್ಗೆ ನಾವು ಆಳವಾದ ವಿಚಾರಣೆಯನ್ನೇ
ಮಾಡಬೇಕಾಗುತ್ತದೆ' ಎಂದು ನ್ಯಾಯಾಲಯ ಹೇಳಿತು.