ಅಯೋಧ್ಯೆ : ಇಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಬಿಲ್ಲು-ಬಾಣ ಹಿಡಿದು ನಿಂತಿರುವ ರಾಮನ ಐದು ಅಡಿ ಎತ್ತರದ ವಿಗ್ರಹ ಪ್ರತಿಷ್ಠಾಪಿಸಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬುಧವಾರ ತೀರ್ಮಾನಿಸಿದೆ.
ಮೈಸೂರಿನ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮನು ಐದು ವರ್ಷದ ಬಾಲಕನಾಗಿದ್ದಾಗ ಹೊಂದಿದ್ದ ರೂಪದ ಮೂರ್ತಿಯನ್ನು ಕೆತ್ತಲಿದ್ದಾರೆ. ಕರ್ನಾಟಕದಿಂದ ತರಲಾಗಿರುವ ಕೃಷ್ಣ ಶಿಲೆಯಲ್ಲಿ ಇದನ್ನು ರೂಪಿಸಲಾಗುತ್ತದೆ.
'ಕರ್ನಾಟಕದ ಕಾರ್ಕಳ ಮತ್ತು ಹೆಗ್ಗಡೆ ದೇವನ ಕೋಟೆಯಿಂದ ಕೃಷ್ಣ ಶಿಲೆಗಳನ್ನು ತರಲಾಗಿದೆ. ಇವುಗಳಲ್ಲಿ ವಿಗ್ರಹ ಕೆತ್ತಲು ಯಾವ ಶಿಲೆ ಬಳಸಬೇಕು ಎಂಬುದನ್ನು ಶಿಲ್ಪಿಯೇ ನಿರ್ಧರಿಸಲಿದ್ದಾರೆ' ಎಂದು ಟ್ರಸ್ಟ್‌ನ ಸದಸ್ಯ ಸ್ವಾಮಿ ತೀರ್ಥ ಪ್ರಸನ್ನಾಚಾರ್ಯ ಅವರು ತಿಳಿಸಿದ್ದಾರೆ.
'ಸಂತರು, ಭೂ ವಿಜ್ಞಾನಿಗಳು, ಶಿಲ್ಪಿಗಳು, ಹಿಂದೂ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿರುವ ಪರಿಣತರು ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳ ಅಭಿಪ್ರಾಯ ಆಲಿಸಿದ ಬಳಿಕವೇ ವಿಗ್ರಹ ಕೆತ್ತಲು ಕೃಷ್ಣ ಶಿಲೆ ಅಂತಿಮಗೊಳಿಸಲಾಗಿದೆ. ಮುಂದಿನ ವರ್ಷದ ಮಕರ ಸಂಕ್ರಾಂತಿ ವೇಳೆಗೆ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರ್ತಿ ಹೇಗಿರಬಹುದು ಎಂಬ ಕುತೂಹಲ ಭಕ್ತರಲ್ಲಿ ಮನೆಮಾಡಿದೆ' ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.