ಮುಂಬೈ: ಬಿಜೆಪಿಗೆ ಪಕ್ಷಾಂತರ ಮಾಡಲು ಎನ್‌ಸಿಪಿಯ ಒಂದು ಬಣದ ಶಾಸಕರು ತನ್ನನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅಲ್ಲಗಳೆದಿದ್ದಾರೆ.
ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಅಜಿತ್ ಪವಾರ್, "ನಾನು ಮಂಗಳವಾರ ಎನ್‌ಸಿಪಿ ಶಾಸಕರ ಸಭೆಯನ್ನು ಆಯೋಜಿಸಿದ್ದೇನೆ ಎಂಬ ಕೆಲವು ಮಾಧ್ಯಮ ವರದಿಗಳು ಸಂಪೂರ್ಣ ಸುಳ್ಳಾಗಿವೆ. ನಾನು ನನ್ನ ಪಕ್ಷದ ಶಾಸಕರು ಹಾಗೂ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಿಲ್ಲ ಎಂದು ತಿಳಿಸಲು ಬಯಸುತ್ತೇನೆ" ಎಂದು ಹೇಳುವ ಮೂಲಕ ಮಾಧ್ಯಮ ವರದಿಗಳನ್ನು ಬಲವಾಗಿ ಅಲ್ಲಗಳೆದಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಅವರು ಮಾಜಿ ಉಪ ಮುಖ್ಯಮಂತ್ರಿಯು ಆಡಳಿತಾರೂಢ ಕೇಸರಿ ಪಾಳಯದ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗಳನ್ನು ನಿರಾಕರಿಸಿ, ಅಂತಹ ಯಾವುದೇ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದ ಮರುದಿನವೇ ಎನ್‌ಸಿಪಿಯ ಪ್ರಭಾವಿ ನಾಯಕರಾದ ಅಜಿತ್ ಪವಾರ್ ಕೂಡಾ ಅಂತಹ ವರದಿಗಳನ್ನು ನಿರಾಕರಿಸಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದ ಅಜಿತ್ ಪವಾರ್, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಅವರು ವಿರೋಧ ಪಕ್ಷದ ಸಾಲನ್ನು ತೊರೆಯುವ ಸೂಚನೆ ಎಂದೇ ಬಿಂಬಿಸಲಾಗಿತ್ತು. ಇದರಿಂದ ಅಜಿತ್ ಪವಾರ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ಬಲಗೊಂಡಿದ್ದವು.