ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ರಾಹುಲ್ ಗಾಂಧಿಯವರ ವಸ್ತುಗಳನ್ನು ಅವರ ತಾಯಿ ಸೋನಿಯಾ ಗಾಂಧಿಯವರ 10 ಜನಪಥ್ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.
ಬಿಜೆಪಿ ಸಂಸದ ಸಿ.ಆರ್.ಪಾಟೀಲ್ ನೇತೃತ್ವದ ಲೋಕಸಭೆಯ ವಸತಿ ಸಮಿತಿಯು, 2005ರಿಂದ ರಾಹುಲ್ ಗಾಂಧಿ ವಾಸಿಸುತ್ತಿದ್ದ 12 ತುಘಲಕ್ ಲೇನ್ ಬಂಗಲೆಯನ್ನು ಏಪ್ರಿಲ್ 22 ರೊಳಗೆ ತೆರವು ಮಾಡುವಂತೆ ಅವರಿಗೆ ಪತ್ರ ಕಳುಹಿಸಿತ್ತು.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಲಾಗಿತ್ತು.
2019ರಲ್ಲಿ ಚುನಾವಣಾ ರ್ಯಾಲಿ ವೇಳೆ ಮೋದಿ ಉಪನಾಮ ಹೊಂದಿರುವವರು ಕಳ್ಳರು ಎಂದು ಹೇಳಿದ್ದರು. ಈ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನ ಸೂರತ್‌ನ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿತ್ತು. ಅಲ್ಲದೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
ಕೆಳ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಗಾಂಧಿಯವರು ಮೇಲ್ಮನವಿಗಾಗಿ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ ಸೂರತ್‌ನ ಸೆಷನ್ಸ್ ಕೋರ್ಟ್ ರಾಹುಲ್ ಮನವಿಯನ್ನು ತಿರಸ್ಕರಿಸಿದೆ.