ಬದಿಯಡ್ಕ: ವ್ಯಾಯಾಮದೊಂದಿಗೆ ಸೂರ್ಯ ರಶ್ಮಿಯು ದೇಹಕ್ಕೆ ಸ್ಪರ್ಶಿಸುವುದರಿಂದ ಶರೀರವು ಸಮತೋಲವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ನಡಿಗೆ ಮನುಷ್ಯ ಜೀವನಕ್ಕೆ ಅತೀ ಅಗತ್ಯ. ಜಂಕ್ ಫುಡ್‍ಗಳಿಂದ ದೂರವಿರಬೇಕು ಎಂದು ಇತ್ತೀಚೆಗೆ ವೃತ್ತಿಯಿಂದ ನಿವೃತ್ತರಾದ ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ ಸುನಿಲ್ ಬದಿಯಡ್ಕ ಅಭಿಪ್ರಾಯಪಟ್ಟರು.
ವಿಶ್ವ ಆರೋಗ್ಯದಿನದಂಗವಾಗಿ ಶುಕ್ರವಾರ ಬದಿಯಡ್ಕ ನವಜೀವನ ಪ್ರೌಢಶಾಲೆಯ ಸಭಾಂಗಣದಲ್ಲಿ ರೋಟರಿ ಬದಿಯಡ್ಕ ಹಮ್ಮಿಕೊಂಡ `ಆರೋಗ್ಯಕ್ಕಾಗಿ ನಡಿಗೆ' ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಬಾಲ್ಯದಲ್ಲಿ ನಾವು ಶಾಲೆಗೆ ಹೋಗುವ ಸಂದರ್ಭ ನಡೆದು ಹೋಗುತ್ತಿದ್ದೆವು. ಆ ಸಂದರ್ಭದಲ್ಲಿ ಸೂರ್ಯನ ಪ್ರಕಾಶವು ನಮ್ಮ ದೇಹವನ್ನು ಸ್ಪರ್ಶಿಸುತ್ತಿದ್ದು, ಅದು ನಮ್ಮ ಆರೋಗ್ಯಕ್ಕೆ ಪೂರಕವಾಗಿದೆ. ಆರೋಗ್ಯಕ್ಕೆ ಮಾರಕವಾದ ಆಹಾರಸೇವನೆಯಿಂದ ಮಕ್ಕಳು ಬಾಲ್ಯದಲ್ಲಿಯೇ ಶುಗರ್ ಮೊದಲಾದ ಖಾಯಿಲೆಗಳಿಗೆ ಒಳಗಾಗುತ್ತಿರುವುದು ಇಂದಿನ ಬೇಸರ ವಿಚಾರ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಲಭಿಸುವ ವಿವಿಧ ತರದ ಹಣ್ಣುಗಳಿಂದ ನಮ್ಮದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುತ್ತವೆ ಎನ್ನುತ್ತಾ ತಮ್ಮ ಬಾಲ್ಯಕಾಲದ ಜೀವನದ ಕುರಿತು ಮಾತನಾಡಿ ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯದ ರಕ್ಷಣೆಗಾಗಿ ವಿಶೇಷ ಕಾಳಜಿಯನ್ನು ವಹಿಸಬೇಕಾಗಿದೆ ಎಂದರು.
ಚೆಂಗಳ ಆರೋಗ್ಯ ಕೇಂದ್ರದ ಉಪ ಆರೋಗ್ಯ ನಿರೀಕ್ಷಕ ದೇವಿದಾಕ್ಷನ್ ಅತಿಥಿಗಳಾಗಿ ಮಾತನಾಡಿ ಆಧುನಿಕ ಜೀವನಶೈಲಿಯನ್ನು ಅನುಸರಿಸಿಕೊಂಡು ವಿವಿಧ ರೋಗಗಳನ್ನು ಆಹ್ವಾನಿಸುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಉತ್ತಮ ಆರೋಗ್ಯಕ್ಕಾಗಿ ನಿಯಮಿತವಾದ ವ್ಯಾಯಾಮ ಅತೀ ಅಗತ್ಯ. ಈ ನಿಟ್ಟಿನಲ್ಲಿ ಬದಿಯಡ್ಕದ ರೋಟರಿ ಘಟಕವು ಹಮ್ಮಿಕೊಂಡ ಕಾರ್ಯ ಶ್ಲಾಘನೀಯ. ವಿಷಮುಕ್ತ ಆಹಾರಕ್ಕೆ ಆದ್ಯತೆಯನ್ನು ನೀಡಬೇಕು. ದಿನನಿತ್ಯ ನಡೆಯುವುದು, ಯೋಗಾಸನಗಳಿಂದ ಶರೀರದ ಪಚನಕ್ರಿಯೆಯು ಸಮರ್ಪಕವಾಗುತ್ತದೆ. ತನ್ಮೂಲಕ ರೋಗರುಜಿನಗಳಿಂದ ಮುಕ್ತಿಯನ್ನು ಪಡೆಯಲು ಸಾಧ್ಯವಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದರಿಂದ ಮುಂದೆ ಜೀವನದಲ್ಲಿ ಬರುವ ಶುಗರ್, ಬಿಪಿ ಮೊದಲಾದವುಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು.
ರೋಟರಿ ಬದಿಯಡ್ಕದ ಅಧ್ಯಕ್ಷ ರಾಧಾಕೃಷ್ಣ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ, ಜ್ಞಾನದೇವ ಶೆಣೈ, ರೋಟರಿ ಕೋಶಾಧಿಕಾರಿ ಕೇಶವ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಸಂತೋಷ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ರಾಘವೇಂದ್ರ ನಾಯಕ್ ಬಿ. ವಂದಿಸಿದರು. ಕಿಶೋರ್ ಕುಮಾರ್ ಪ್ರಾರ್ಥನೆ ಹಾಡಿದರು. ರಾಜೇಶ್ ಚಂಬಲ್ತಿಮಾರ್ ನಿರೂಪಿಸಿದರು.
ಆರೋಗ್ಯದ ರಕ್ಷಣೆಗೆ ವಿಶೇಷ ಕಾಳಜಿ ಅಗತ್ಯ: ಡಾ.ಸುನಿಲ್: ರೋಟರಿ ಬದಿಯಡ್ಕದ ವಿಶ್ವ ಆರೋಗ್ಯದಿನಾಚರಣೆ ಸಭಾ ಕಾರ್ಯಕ್ರಮ
0
ಏಪ್ರಿಲ್ 09, 2023
Tags