ನವದೆಹಲಿ: 'ಮನ್ ಕಿ ಬಾತ್' ಒಂದು ಮಾಸಿಕ ಕಾರ್ಯಕ್ರಮ. ವರ್ಷದ ಪ್ರತೀ ತಿಂಗಳ ಕೊನೆ ಭಾನುವಾರದಂದು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುತ್ತದೆ. ಈ 'ಮನ್ ಕಿ ಬಾತ್' ಮೂಲಕ ದೇಶದ ಪ್ರಧಾನಿ ನರೇದ್ರ ಮೋದಿ ಅವರು ಪ್ರಜೆಗಳೊಂದಿಗೆ ಮಾತುಕತೆ ನಡೆಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳ ಕೊನೇ ಭಾನುವಾರ ನಡೆಸಿಕೊಡುವ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ ಶತಕ ಪೂರೈಸಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಏಪ್ರಿಲ್ 30ರಂದು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ನ 100ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದೀಗ ಮನ್ ಕೀ ಬಾತ್ ಶತಕದ ಆವೃತ್ತಿ ತಲುಪುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಸಂಭ್ರಮಿಸುವ ಸಲುವಾಗಿ ಬಿಜೆಪಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದೆ. ಈ ಕಾರ್ಯಕ್ರಮ ದೊಡ್ಡ ಸಂಖ್ಯೆಯ ಕೇಳುಗರನ್ನು ಹೊಂದಿದ್ದು, ಇದೀಗ ಬಾಲಿವುಡ್ ಹಿರಿಯ, ಬಹುಬೇಡಿಕೆ ನಟ ಅಮೀರ್ ಖಾನ್ ಮಾತನಾಡಿದ್ದಾರೆ. ಮನ್ ಕೀ ಬಾತ್ ಸಮಾವೇಶಕ್ಕೆ ಬಂದ ನಟ ಆಮೀರ್ ಖಾನ್ ಮಾಧ್ಯಮದೊಂದಿಗೆ ಮಾತನಾಡಿ ‘ದೇಶದ ನಾಯಕ ಸಾಮಾನ್ಯ ಜನರೊಂದಿಗೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸುವುದು, ತಮ್ಮ ವಿಚಾರಗಳನ್ನು ಅವರ ಎದುರು ಇಡುವುದು, ಸಲಹೆಗಳನ್ನು ಕೊಡುವುದೆಲ್ಲ ಸಂವಹನ ಕ್ರಿಯೆಯ ಅತ್ಯಂತ ಪ್ರಮುಖ ಭಾಗ’ ಎಂದು ಹೇಳಿದರು. ಒಬ್ಬ ನಾಯಕ ಪ್ರಬಲ ಸಂವಹನದೊಂದಿಗೆ ಹೇಗೆ ದೇಶವನ್ನು ಮುನ್ನಡೆಸುತ್ತಾರೆ, ಅವರು ನೋಡುವುದನ್ನು ಜನರಿಗೆ ಹೇಗೆ ಹೇಳುತ್ತಾರೆ, ನಾಯಕನಾದವನು ಭವಿಷ್ಯವನ್ನು ಹೇಗೆ ನೋಡುತ್ತಾನೆ, ಜನರಿಂದ ಯಾವ ಸ್ವರೂಪದ ಬೆಂಬಲವನ್ನು ಬಯಸುತ್ತಿದ್ದಾನೆ..ಎಂಬುದನ್ನೆಲ್ಲ ಈ ಮನ್ ಕೀ ಬಾತ್ ತೋರಿಸಿದೆ’ ಎಂದೂ ಆಮಿರ್ ಖಾನ್ ಹೇಳಿದ್ದಾರೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಗೌರವಾನ್ವಿತ ಅತಿಥಿಯಾಗಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಒಂದು ದಿನದ ಸಮಾವೇಶವನ್ನು ಉದ್ಘಾಟಿಸಿದರು. ಪ್ರಧಾನ ಮಂತ್ರಿಗಳ ಮಾಸಿಕ ರೇಡಿಯೋ ಕಾರ್ಯಕ್ರಮದ 100 ನೇ ಸಂಚಿಕೆಯನ್ನು ಏಪ್ರಿಲ್ 30 ರಂದು ಪ್ರಸಾರ ಮಾಡಲು ನಿರ್ಧರಿಸಲಾಗಿದೆ. 2014ರಲ್ಲಿ ನರೇಂದ್ರ ಮೋದಿಯವರು ಮೊದಲ ಬಾರಿ ಪ್ರಧಾನಿಯಾದ ನಂತರ, ಅದೇ ವರ್ಷ ಅಕ್ಟೋಬರ್ನಲ್ಲಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದರು. ಇದು ರೇಡಿಯೋ ಮೂಲಕ ಮೋದಿಯವರು ದೇಶದ ಜನರೊಂದಿಗೆ ಮಾತನಾಡುವ ಕಾರ್ಯಕ್ರಮ.
ಇಲ್ಲಿ ಅವರು ರಾಜಕೀಯ ವಿಷಯಗಳನ್ನು ಹೇಳುವುದೇ ಇಲ್ಲ. ಬದಲಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಅರಿವು ಮೂಡಿಸುತ್ತಾರೆ.