ನವದೆಹಲಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿರುವ ಪೇಪರ್ ಪ್ಲೇಟ್‌ಗಳಲ್ಲಿ ಊಟ ಬಡಿಸಿದ ಹೋಟೆಲ್ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದಾರೆ ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ(ಎನ್‌ಸಿಎಸ್‌ಸಿ) ಮಂಗಳವಾರ ತಿಳಿಸಿದೆ.
ಕೋನಸೀಮಾ ಜಿಲ್ಲೆಯ ಹೋಟೆಲ್‌ವೊಂದರಲ್ಲಿ ಅಂಬೇಡ್ಕರ್ ಚಿತ್ರವಿರುವ ಪೇಪರ್ ಪ್ಲೇಟ್‌ಗಳಲ್ಲಿ ಆಹಾರ ಬಡಿಸಲಾಗಿದೆ ಎಂದು ಆರೋಪಿಸಿ ಎನ್‌ಸಿಎಸ್‌ಸಿ ಕಳೆದ ವರ್ಷ ಜುಲೈ 8 ರಂದು ಟ್ವಿಟರ್ ಮೂಲಕ ದೂರು ನೀಡಿತ್ತು.
ಹೋಟೆಲ್ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ ಹೋಟೆಲ್ ಮಾಲೀಕರು ಪ್ರತಿಭಟನಾಕಾರರ ವಿರುದ್ಧ ಕೇಸ್ ದಾಖಲಿಸಿದ್ದರು ಮತ್ತು ಈ ಸಂಬಂಧ ಪೊಲೀಸರು 18 ದಲಿತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಆದರೆ, ಪೊಲೀಸರು ವಿಚಾರಣೆ ನಡೆಸಿದ ಬಳಿಕ ಹೊಟೇಲ್ ಮಾಲೀಕ ಹಾಗೂ ಪೇಪರ್ ಪ್ಲೇಟ್ ಮಾರಾಟಗಾರರ ಮೇಲಿನ ಆರೋಪ ನಿಜವೆಂದು ತಿಳಿದು ಬಂದಿದೆ. ನಂತರ ಆರೋಪಿಗಳನ್ನು ಬಂಧಿಸಲಾಗಿದೆ.
ಆಯೋಗದ ಸೂಚನೆಯಂತೆ ಹೋಟೆಲ್ ಮಾಲೀಕರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 295 ಎ ಅಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ಎನ್‌ಸಿಎಸ್‌ಸಿ ಅಧ್ಯಕ್ಷ ವಿಜಯ್ ಸಂಪ್ಲಾ ಅವರು ಹೇಳಿದ್ದಾರೆ.