ತಾಯಿ ಹಾಗೂ ಮಗುವಿನ ಭಾಂದವ್ಯ ಒಂದು ರೀತಿ ಬಿಡಿಸಲಾರದ ನಂಟು. ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹು ದೊಡ್ಡದಿದೆ. ತಾಯಿಯ ಎದೆಹಾಲಿನಲ್ಲಿ ಅತ್ಯಧಿಕ ಪೋಷಕಾಂಶಗಳನ್ನು ಹೊಂದಿದ್ದು ಇದು ಮಗುವಿನ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ಎದೆಹಾಲು ನೀಡುವುದರಿಂದ ತಾಯಿ ಹಾಗೂ ಮಗುವಿನ ಭಾಂದವ್ಯ ಕೂಡ ಉತ್ತಮವಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಆಧುನಿಕ ತಾಯಿಯರು ಮಕ್ಕಳಿಗೆ ಎದೆಹಾಲು ಕುಡಿಸುವಾಗ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಅಷ್ಟಕ್ಕು ಎದೆಹಾಲು ಕುಡಿಸುವಾಗ ಮೊಬೈಲ್ ಬಳಕೆ ಮಾಡಬಾರದು ಯಾಕೆ ಅನ್ನೋದನ್ನು ತಿಳಿಯೋಣ.
ಎದೆಹಾಲು ಕುಡಿಸುವಾಗ ಮೊಬೈಲ್ ಬಳಸಬಾರದು ಯಾಕೆ?
ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಮ್ಮ ದೇಹದ ಒಂದು ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದೆ. ಜನ ಮೊಬೈಲ್ ಬಿಟ್ಟು ಐದು ನಿಮಿಷ ಕೂಡ ಬಿಟ್ಟಿರಲಾರರು ಎಂಬ ಪರಿಸ್ಥಿತಿಗೆ ತಲುಪಿ ಬಿಟ್ಟಿದ್ದಾರೆ. ಅದ್ರಲ್ಲೂ ಈಗಿನ ಮಾರ್ಡನ್ ತಾಯಂದಿರು ಹೇಗೆಂದರೆ ಇತ್ತ ಮಗುವಿಗೆ ಎದೆಹಾಲು ಕುಡಿಸುತ್ತಲೇ ಮೊಬೈಲ್‌ನಲ್ಲಿ ವ್ಯವಹರಿಸ್ತಿರುತ್ತಾರೆ. ನಿಜ ಹೇಳ್ಬೇಕಂದ್ರೆ ಇದು ಸರಿಯಾದ ವಿಧಾನವಲ್ಲ. ಇದ್ರಿಂದ ಯಾವೆಲ್ಲಾ ತೊಂದರೆಗಳು ಎದುರಾಗುತ್ತೆ ಅನ್ನೋದನ್ನು ಒಂದೊಂದಾಗಿ ನೋಡೋಣ.
1. ತಾಯಿ ಹಾಗೂ ಮಗುವಿನ ಭಾಂದವ್ಯಕ್ಕೆ ಅಡ್ಡಿಯಾಗುತ್ತದೆ
ಮೊದಲ ಆರು ತಿಂಗಳು ತಾಯಿ ಹಾಗೂ ಮಗುವಿನ ಮಧ್ಯೆ ಅದೊಂದು ರೀತಿಯ ಭಾಂದವ್ಯ ಇರಬೇಕು. ಹಾಲು ಕುಡಿಸುವ ಸಂದರ್ಭದಲ್ಲಿ ಇಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಒಂದು ವೇಳೆ ನೀವು ಈ ಸಮಯದಲ್ಲಿ ಫೋನ್‌ನಲ್ಲಿ ಬ್ಯುಸಿಯಾಗಿದ್ದರೆ ನಿಮ್ಮಿಬ್ಬರ ನಡುವಿನ ಭಾಂದವ್ಯಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ. ಹೀಗಾಗಿ ಮಗುವಿಗೆ ಹಾಲು ಕುಡಿಸುವ ಸಂದರ್ಭದಲ್ಲಿ ಮೊಬೈಲ್ ಬಳಸಲೇಬೇಡಿ.
2. ನಿಮ್ಮ ಗಮನವಿಲ್ಲದಾಗ ಮಗು ಒದ್ದಾಡುತ್ತದೆ
ಮಗುವಿಗೆ ಎದೆಹಾಲು ಉಣಿಸುವಾಗ ನಿಮ್ಮ ಗಮನ ಬೇರೆ ಕಡೆ ಇದ್ದು ನೀವು ಫೋನ್‌ನಲ್ಲಿ ಬ್ಯೂಸಿಯಾಗಿದ್ದರೆ ಮಗು ಒದ್ದಾಡುತ್ತದೆ. ಕೆಲವೊಂದು ಸಲ ಅಳೋದಕ್ಕೆ ಶುರು ಮಾಡುತ್ತದೆ. ಮಗು ತುಂಬಾನೇ ಸೂಕ್ಷ್ಮವಾಗಿರೋದ್ರಿಂದ ಅದಕ್ಕೆ ತಾಯಿ ಬಿಟ್ಟು ಬೇರೆ ಪ್ರಪಂಚವೇ ಗೊತ್ತಿರೋದಿಲ್ಲ. ಒಂದು ಅಧ್ಯಯನದ ಪ್ರಕಾರ ತಾಯಿಯ ಗಮನ ಮಗುವಿನ ಕಡೆಗೆ ಇಲ್ಲದಿದ್ದಾಗ ತಾಯಿಯ ಗಮನವನ್ನು ಸೆಳೆಯೋದಕ್ಕೆ ಮಗು ಒದ್ದಾಡುತ್ತಂತೆ. ಇದರಿಂದ ಮಗುವಿನ ಹಾರ್ಮೋನುಗಳಲ್ಲಿ ಒತ್ತಡ ಸೃಷ್ಟಿಯಾಗುತ್ತಂತೆ. ಇದು ಪ್ರತಿನಿತ್ಯ ಮುಂದುವರೆದರೆ ಅವರು ಭಯಭೀತರಾಗಿ ಅಳಲು ಶುರು ಮಾಡುತ್ತಾರಂತೆ.
3. ಮಗುವಿಗೆ ಸರಿಯಾಗಿ ಎದೆಹಾಲು ಕುಡಿಯಲು ಸಾಧ್ಯವಾಗೋದಿಲ್ಲ
ಮಗುವಿನ ಪೋಷಣೆಯಲ್ಲಿ ತಾಯಿ ಆ ತಾಯ್ತನದ ಖುಷಿಯನ್ನು ಅನುಭವಿಸುತ್ತಾಳೆ. ಮಗುವಿಗೆ ಎದೆಹಾಲು ಉಣಿಸುವುದು ಕೂಡ ತಾಯ್ತನದ ಒಂದು ಭಾಗ. ನಿಮ್ಮ ಗಮನ ಮಗುವಿನ ಕಡೆಗೆ ಇಲ್ಲದಾಗ ಮಗುವಿಗೆ ಸರಿಯಾಗಿ ಎದೆಹಾಲು ಸಿಗದೇ ಹೋಗುತ್ತದೆ. ಆಗ ಮಗು ಒದ್ದಾಡಲು ಶುರು ಮಾಡುತ್ತದೆ. ಈ ಸಮಯದಲ್ಲಿ ಮಗುವಿಗೆ ಗೊಂದಲವಾಗುತ್ತದೆ. ಇದೇ ಕಾರಣಕ್ಕೆ ಹೇಳುವುದು ಎದೆಹಾಲು ಉಣಿಸುವ ಸಮಯದಲ್ಲಿ ತಾಯಿ ಬೇರ್ಯಾವುದೇ ಚಟುವಟಿಕೆಯನ್ನು ಮಾಡಬಾರದು.
4. ಮಗು ವಿಕಿರಣಕ್ಕೆ ಒಟ್ಟುವ ಅಪಾಯವನ್ನು ಹೊಂದಿದೆ
ನಮಗೆಲ್ಲಾ ಗೊತ್ತಿರುವ ಹಾಗೆ ಮೊಬೈಲ್ ಫೋನ್ ವಿಕಿರಣವನ್ನು ಹೊರ ಸೂಸುತ್ತದೆ. ಚಿಕ್ಕ ಮಗುವಿಗೆ ಈ ವಿಕಿರಣಗಳು ದೊಡ್ಡ ಮಟ್ಟದಲ್ಲಿ ಹಾನಿ ಮಾಡುವ ಸಾಧ್ಯತೆ ಇದೆ. ಮೊಬೈಲ್‌ನ ವಿಕಿರಣಗಳು ಅಸ್ಥಿರವಾಗಿರುತ್ತದೆ. ಇದು ಮಗುವಿನ ಡಿಎನ್‌ಎ ಹಾಗೂ ಮೆದುಳಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಉಂಟಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಹೇಳುವುದು ಮಕ್ಕಳಿಗೆ ಹಾಲುಣಿಸುವ ಸಂದರ್ಭದಲ್ಲಿ ಮೊಬೈಲ್ ಬಳಸಬಾರದು ಎಂದು.
5. ಮಗು ಹಾಲು ಯಾವ ರೀತಿ ಕುಡಿಯುತ್ತಿದೆ ಎಂದು ಗೊತ್ತಾಗೋದಿಲ್ಲ
ಮಗುವಿಗೆ ಎದೆಹಾಲು ಕುಡಿಸುವ ಸಂದರ್ಭದಲ್ಲಿ ಮಗು ಯಾವ ಮಾದರಿಯಲ್ಲಿ ಹಾಲು ಕುಡಿಯುತ್ತಿದೆ. ಹಾಗೂ ಮಗುವಿಗೆ ಬೇಕಾದ ಹಾಲು ಲಭ್ಯವಿದೆಯಾ ಎಂಬುವುದನ್ನು ನೋಡಿಕೊಳ್ಳುವುದು ತಾಯಿಯಾದವಳ ಜವಾಬ್ದಾರಿಯಾಗಿದೆ. ನೀವು ಸರಿಯಾಗಿ ಗಮನಿಸಿದರೆ ಮಗುವಿಗೆ ಸರಿಯಾದ ಪ್ರಮಾಣದ ಹಾಲು ದೊರೆಯುತ್ತಿದೆಯಾ ಹಾಗೂ ಮಗು ಆರಾಮದಾಯಕವಾಗಿದ್ಯಾ ಎಂದು ತಿಳಿಯುತ್ತದೆ. ಕೆಲವೊಂದು ಸಲ ಎದೆಹಾಲು ಮಗುವಿನ ಮೂಗಿನ ಒಳಗೆ ಹೋಗುವ ಸಾಧ್ಯತೆ ಇರಬೇಕು. ಇದೇ ಕಾರಣಕ್ಕೆ ಎಚ್ಚರಿಕೆಯಿಂದ ಇರಬೇಕು. ನೀವು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದರೆ ನಿಮಗೆ ಈ ವಿಚಾರ ತಿಳಿಯೋದಿಲ್ಲ.
ಒಟ್ಟಿನಲ್ಲಿ ಮಗುವಿನ ಕಾಳಜಿ ಮಾಡುವುದು ತಾಯಿಯಾದವಳ ಜವಾಬ್ದಾರಿಯಾಗಿದೆ. ಎದೆಹಾಲು ಕುಡಿಸುವಾಗ ತಾಯಿಯ ಗಮನ ಸಂಪೂರ್ಣವಾಗಿ ಮಗುವಿನ ಮೇಲೆಯೇ ಇರಬೇಕು.