ನವದೆಹಲಿ: ರಂಗಭೂಮಿ ದಿಗ್ಗಜೆ ಮತ್ತು ರಾಷ್ಟ್ರ ರಾಜಧಾನಿಯ ಐಕಾನಿಕ್ ಅಕ್ಷರ ಥಿಯೇಟರ್‌ನ ಸಹ ಸಂಸ್ಥಾಪಕಿ ಜಲಬಾಲ ವೈದ್ಯ ಅವರು ಭಾನುವಾರ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಮತ್ತು ರಂಗಭೂಮಿ ನಿರ್ದೇಶಕಿ ಅನಸೂಯಾ ವೈದ್ಯ ಶೆಟ್ಟಿ ಅವರು ತಿಳಿಸಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 86 ವರ್ಷ ವೈದ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಭಾರತೀಯ ಲೇಖಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುರೇಶ್ ವೈದ್ಯ ಮತ್ತು ಇಂಗ್ಲಿಷ್ ಶಾಸ್ತ್ರೀಯ ಗಾಯಕಿ ಮ್ಯಾಡ್ಜ್ ಫ್ರಾಂಕೀಸ್ ದಂಪತಿಗೆ ಲಂಡನ್‌ನಲ್ಲಿ ಜನಿಸಿದ ಜಲಬಾಲ ವೈದ್ಯ ಅವರು ದೆಹಲಿಯ ವಿವಿಧ ರಾಷ್ಟ್ರೀಯ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಬರೆಯುತ್ತಾ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವೈದ್ಯ ಅವರು, ಸಂಗೀತ ನಾಟಕ ಅಕಾಡೆಮಿಯ ಟ್ಯಾಗೋರ್ ಪ್ರಶಸ್ತಿ, ದೆಹಲಿ ನಾಟ್ಯ ಸಂಘ ಪ್ರಶಸ್ತಿ, ಆಂಧ್ರಪ್ರದೇಶ ನಾಟ್ಯ ಅಕಾಡೆಮಿ ಗೌರವ, ಅಮೆರಿಕದ ಬಾಲ್ಟಿಮೋರ್ ನಗರದ ಗೌರವ ಪೌರತ್ವ ಮತ್ತು ಜೀವಮಾನದ ಸಾಧನೆಗಾಗಿ ದೆಹಲಿ ಸರ್ಕಾರದ ವರಿಷ್ಠ್ ಸಮ್ಮಾನ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ವೈದ್ಯ ಅವರು ನವದೆಹಲಿಯ ಲಿಂಕ್ ಮ್ಯಾಗಜೀನ್‌ನಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರಿಗೆ ಪರಿಚಯವಾದ ಗೋಪಾಲ್ ಶರ್ಮನ್ ಅವರನ್ನು ವಿವಾಹವಾದರು.
ಜಲಬಾಲ ವೈದ್ಯ ಅವರು 1968 ರಲ್ಲಿ 'ಫುಲ್ ಸರ್ಕಲ್' ನೊಂದಿಗೆ ರಂಗಭೂಮಿ ಕಲಾವಿದೆಯಾಗಿ ವೃತಿ ಜೀವನ ಆರಂಭಿಸಿದರು.