ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಉಕ್ರೇನ್‌ನ ಮೊದಲ ಉಪ ವಿದೇಶಾಂಗ ವ್ಯವಹರಗಳ ಸಚಿವೆ ಎಮಿನ್ ಡಿಝಾಪರೋವ ಅವರು ಇಲ್ಲಿಯ ಕೇಂದ್ರ ಸಚಿವರೊಬ್ಬರಿಗೆ ಹಸ್ತಾಂತರಿಸಿದ್ದಾರೆ.
ಎಮಿನ್ ಅವರು ಕೈಗೊಂಡಿದ್ದ ಮೂರು ದಿನಗಳ ಭಾರತ ಪ್ರವಾಸವು ಬುಧವಾರ ಮುಕ್ತಾಯವಾಯಿತು. ಝೆಲೆನ್‌ಸ್ಕಿ ಅವರು ಬರೆದಿರುವ ಪತ್ರವನ್ನು ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಮಂಗಳವಾರ ನಡೆದ ಸಭೆಯೊಂದರಲ್ಲಿ ಎಮಿನ್ ಹಸ್ತಾಂತರಿಸಿದರು.
ಭಾರತದ ಜೊತೆ ದೃಢವಾದ ಮತ್ತು ನಿಕಟ ಸಂಬಂಧ ಬೆಳೆಸುವ ಇಂಗಿತವನ್ನು ಉಕ್ರೇನ್ ಹೊಂದಿದೆ ಎಂದು ಎಮಿನ್ ಅವರು ಭಾರತದ ತಮ್ಮ ಸಂವಾದಕರಿಗೆ ತಿಳಿಸಿದ್ದಾರೆ.
ಯುದ್ಧ ಪೀಡಿತ ಉಕ್ರೇನ್‌ಗೆ ಔಷಧ, ವೈದ್ಯಕೀಯ ಉಪಕರಣಗಳು ಸೇರಿ ಮತ್ತಷ್ಟು ಮಾನವೀಯ ನೆರವನ್ನು ನೀಡುವಂತೆ ಉಕ್ರೇನ್ ಮನವಿ ಮಾಡಿದೆ. ಅಲ್ಲದೇ, ಉಕ್ರೇನ್‌ನಲ್ಲಿ ಮೂಲಸೌಕರ್ಯ ಪುನರ್‌ನಿರ್ಮಾಣ ಮಾಡುವುದು ಭಾರತೀಯ ಸಂಸ್ಥೆಗಳಿಗೆ ಉತ್ತಮ ಅವಕಾಶವಾಗಲಿದೆ ಎಂದು ಎಮಿನ್ ಹೇಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮ ಅವರು ತಿಳಿಸಿದ್ದಾರೆ.
ಉಭಯದೇಶಗಳ ವಿದೇಶಾಂಗ ಸಚಿವಾಲಯಗಳ ಮುಂದಿನ ಸುತ್ತಿನ ಸಭೆಯನ್ನು ಉಕ್ರೇನ್ ರಾಜಧಾನಿ ಕೀವ್‌ನಲ್ಲಿ, ಎರಡೂ ದೇಶಗಳಿಗೆ ಅನುಕೂಲವಾಗುಂಥ ದಿನದಂದು ಏರ್ಪಡಿಸಲಾಗುವುದು ಎಂದು ಸಚಿವಾಲಯ ಮಾಹಿತಿ ನೀಡಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಉಕ್ರೇನ್ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿರುವುದು.