ನವದೆಹಲಿ: ಯೂಟ್ಯೂಬ್ ಜಾಲತಾಣದ ಮೂಲಕ ನೇರಪ್ರಸಾರವಾಗುವ ಕೋರ್ಟ್‌ನ ಕಲಾಪಗಳ ಹಕ್ಕುಸ್ವಾಮ್ಯವನ್ನು ಕಾಯ್ದುಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿತು.
2018ರ ತೀರ್ಪಿಗೆ ಅನುಗುಣವಾಗಿ ಈ ಬಗ್ಗೆ ಕ್ರಮತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ ಸುಪ್ರೀಂ ಕೋರ್ಟ್‌ನ ಪೀಠವು, ಈ ಕುರಿತು ಆರ್‌ಎಸ್‌ಎಸ್‌ನ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ, ಜೆ.ಬಿ.ಪಾರ್ದಿವಾಲಾ ಅವರಿದ್ದ ಪೀಠವು, ಅರ್ಜಿದಾರರು ಎತ್ತಿರುವ ಆಕ್ಷೇಪಗಳನ್ನು ಗಮನದಲ್ಲಿ ಇರಿಸಿಕೊಂಡು ಹಕ್ಕುಸ್ವಾಮ್ಯ ರಕ್ಷಿಸುವ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ ಎಂದು ತಿಳಿಸಿತು.
'ಅಗತ್ಯ ಸಲಹೆಗಳನ್ನು ನೀವೂ ನೀಡಬಹುದು' ಎಂದು ಗೋವಿಂದಾಚಾರ್ಯ ಅವರನ್ನು ಪ್ರತಿನಿಧಿಸಿದ್ದ ವಕೀಲರಾದ ವಿರಾಗ್ ಗುಪ್ತಾ ಅವರಿಗೆ ಪೀಠ ತಿಳಿಸಿತು. ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದರು.
'ನೇರ ಪ್ರಸಾರದ ಹಕ್ಕುಸ್ವಾಮ್ಯ ರಕ್ಷಣೆಗೆ 2018ರ ತೀರ್ಪಿಗೆ ಅನುಗುಣವಾಗಿ ಕೋರ್ಟ್‌ನ ರಿಜಿಸ್ಟ್ರಿಯು ಯಾವುದೇ ಕ್ರಮವಹಿಸಿಲ್ಲ ಎಂದು ಟೀಕಿಸುವುದು ಸುಲಭ. ಆದರೆ, ಥರ್ಡ್ ಪಾರ್ಟಿ ತಂತ್ರಾಂಶಗಳ ನೆರವಿಲ್ಲದೆ ನೇರ ಪ್ರಸಾರ ಮಾಡುವಷ್ಟು ತಾಂತ್ರಿಕ ಮೂಲಸೌಕರ್ಯ ನಮ್ಮಲ್ಲಿ ಇಲ್ಲ ಎಂದು ಎಂದು ಎನ್‌ಐಸಿ ಹೇಳಿದೆ. ಈ ಹಂತದಲ್ಲಿ ಏನು ಕ್ರಮವಹಿಸಬೇಕು ಎಂದೂ ನೀವು ಸಲಹೆ ನೀಡಿ ಎಂದೂ ಪೀಠ ಗೋವಿಂದಾಚಾರ್ಯ ಅವರ ವಕೀಲರಿಗೆ ತಿಳಿಸಿತು.
ಗೋವಿಂದಾಚಾರ್ಯ ಅವರು ತಮ್ಮ ಅರ್ಜಿಯಲ್ಲಿ, ನೇರಪ್ರಸಾರ ವಿಷಯದಲ್ಲಿ ಕಲಾಪದ ಹಕ್ಕುಸ್ವಾಮ್ಯ ಉಳಿಸಿಕೊಳ್ಳಬೇಕು. ಕಲಾಪದ ಮುದ್ರಣವನ್ನು ಜಾಲತಾಣವು, ಸದ್ಯ (ಯೂಟ್ಯೂಬ್) ವಾಣಿಜ್ಯದ ದೃಷ್ಟಿಯಿಂದ ಬಳಸದಂತೆ ಎಚ್ಚರವಹಿಸಬೇಕು ಎಂದು ಪ್ರತಿಪಾದಿಸಿದ್ದರು.