ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿರುವ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು, ವಯಸ್ಕರಿಗೆ ಬೂಸ್ಟರ್ ಡೋಸ್‌ನಂತೆ ಕೊವೊವ್ಯಾಕ್ಸ್ ಅನ್ನು ನೀಡಲು ಕೋವಿನ್ ಪೋರ್ಟಲ್‌ನಲ್ಲಿ ಸೇರಿಸಬೇಕೆಂದು ಕೋರಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಮಾರ್ಚ್ 27ರಂದು ಈ ಕುರಿತು ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್‌ನ ಎರಡು ಡೋಸ್‌ಗಳನ್ನು ಪಡೆದವರಿಗೆ ಕೊವೊವ್ಯಾಕ್ಸ್ ಅನ್ನು ಬೂಸ್ಟರ್ ಡೋಸ್‌ನಂತೆ ನೀಡಬೇಕೆಂಬ ಬಗ್ಗೆ ಕೋವಿನ್ ಪೋರ್ಟಲ್‌ನಲ್ಲಿ ಸೇರಿಸುವಂತೆ ಕಳೆದ ತಿಂಗಳು ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಡಾ.ಎನ್.ಕೆ. ಅರೋರಾ ಕೂಡಾ ಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು.
ಕೊವೊವ್ಯಾಕ್ಸ್ ಅನ್ನು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹಾಗೂ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿಯು ಅನುಮೋದಿಸಿದೆ. ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (ಡಿಸಿಜಿಐ) ಕೂಡಾ ಇದೇ ಜನವರಿ 16ರಂದು ಕೊವೊವ್ಯಾಕ್ಸ್‌ನ ಮಾರುಕಟ್ಟೆ ಅಧಿಕಾರವನ್ನು ಅನುಮೋದಿಸಿದೆ.
ಕೊವೊವ್ಯಾಕ್ಸ್ ಅನ್ನು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ವಯಸ್ಕರಿಗೆ ಬಳಸಬೇಕೆಂದು ಡಿಜಿಸಿಐ 2021ರ ಡಿ. 28ರಂದು ಅನುಮೋದನೆ ನೀಡಿತ್ತು.