ಕಾಸರಗೋಡು: ಕೇರಳ ಆರೋಗ್ಯ ವಲಯದಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಕೇಂದ್ರ(ಏಮ್ಸ್)ಕೇರಳಕ್ಕೆ ಶೀಘ್ರ ಮಂಜೂರುಗೊಳಿಸುವಂತೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ರಾಜ್ಯಾಧ್ಯಕ್ಷ ರಾಜು ಅಪ್ಸರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರದ ಮೂಲಕ ಒತ್ತಯಿಸಿದ್ದಾರೆ.
ಏಮ್ಸ್ ಆರೋಗ್ಯ ಕ್ಷೇತ್ರದಲ್ಲಿನ ಮಹತ್ವದ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಗೆ ನಿರ್ಣಾಯಕವಾಗಿದೆ. ಭಾರತದ ಅಭಿವೃದ್ಧಿಯಲ್ಲಿ ನಿರ್ಣಾಯಕ ಹೆಜ್ಜೆಗಳನ್ನು ಇಡುವ ಮತ್ತು ಹೊಸ ದೃಷ್ಟಿಕೋನ ಹೊಂದಿರುವ ನರೇಂದ್ರ ಮೋದಿ ಆಡಳಿತವನ್ನು ದೇಶದ ಜನತೆ ಆಶಾಭಾವನೆಯಿಂದ ನೋಡುತ್ತಿದೆ. ದೇಶದ ವ್ಯಾಪಾರ ಮತ್ತು ಉದ್ಯಮ ವಲಯವು ಕೇಂದ್ರ ಆಡಳಿತವನ್ನು ಅತ್ಯಂತ ಭರವಸೆಯಿಂದ ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏ. 24, 25ರಂದು ಕೇರಳಕ್ಕೆ ಭೇಟಿ ನೀಡಲಿದ್ದು, ಕೇರಳದ ಸಾರ್ವಜನಿಕ ಸಾರಿಗೆ, ವಾಣಿಜ್ಯ ಮತ್ತು ಉದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿರುವ ವಂದೇ ಭಾರರ್ ರೈಲಿನ ಉದ್ಘಾಟನೆ ಕೇರಳಕ್ಕೆ ಹೊಸ ಅನುಭವವಾಗಲಿದೆ ಎಂದು ಅವರು ಹೇಳಿದರು.
ಕೇರಳಕ್ಕೆ ಈ ಯೋಜನೆಯನ್ನು ನೀಡಿದ ಪ್ರಧಾನಿ ಅವರು ಎರಡು ಪ್ರವಾಹ ಮತ್ತು ಮೂರು ವರ್ಷಗಳ ಕೋವಿಡ್‍ನಿಂದ ಧ್ವಂಸಗೊಂಡಿರುವ ಕೇರಳದ ವಾಣಿಜ್ಯ ಮತ್ತು ಕೈಗಾರಿಕಾ ವಲಯದ ಪುನರುಜ್ಜೀವನಕ್ಕಾಗಿ ರಕ್ಷಣಾ ಪ್ಯಾಕೇಜ್ ಘೋಷಿಸಲು ಮತ್ತು ರಬ್ಬರ್‍ಗೆ ಕನಿಷ್ಠ 300 ಕೋಟಿ ರೂ.ಗಳನ್ನು ಪಡೆಯಲು ಕ್ರಮಕೈಗೊಳ್ಳುವಂತೆ ಪ್ರಧಾನಿಯನ್ನು ಆಗ್ರಹಿಸಿದ್ದಾರೆ.