ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ರೈಲು ಕಂಪಾರ್ಟ್ಮೆಂಟ್ನಲ್ಲಿ ತನ್ನ ಮೊಬೈಲ್ ಫೋನ್ ಕದ್ದ ಕಳ್ಳನನ್ನು ಹಿಡಿಯಲು ಚಲಿಸುವ ರೈಲಿನಿಂದ ಮಹಿಳೆಯೊಬ್ಬರು ಜಿಗಿದ್ದಿದ್ದು, ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕ್ಯಾನಿಂಗ್ ಉಪ ಜಿಲ್ಲಾಸ್ಪತ್ರೆಯ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಗುರುವಾರ ಸಂಜೆ ಆಸ್ಪತ್ರೆಯ ಕರ್ತವ್ಯವನ್ನು ಮುಗಿಸಿದ ನಂತರ ರೈಲಿನಲ್ಲಿ ಮನೆಗೆ ತೆರಳುತ್ತಿದ್ದರು. ಕ್ಯಾನಿಂಗ್-ಸೀಲ್ದಾಹ್ ರೈಲಿನಲ್ಲಿ ಮಟ್ಲಾ ಹಾಲ್ಟ್ ನಿಲ್ದಾಣದ ಬಳಿ ಕಳ್ಳನೊಬ್ಬ ಚಲಿಸುವ ರೈಲಿನ ಕಂಪಾರ್ಟ್ಮೆಂಟ್ನಿಂದ ಆಕೆಯ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಜಿಗಿದು ಪರಾರಿಯಾಗಿದ್ದಾನೆ. ಈ ವೇಳೆ ಮಹಿಳೆ ಕೂಡ ಕಳ್ಳನನ್ನು ಹಿಡಿಯಲು ಮಟ್ಲಾ ಹಾಲ್ಟ್ ನಿಲ್ದಾಣದಲ್ಲಿ ಚಲಿಸುವ ರೈಲಿನಿಂದ ಜಿಗಿದಿದ್ದಾರೆ. ಆದರೆ, ಗಾಯಗೊಂಡಿದ್ದಾರೆ.
ಮಾಹಿತಿ ಪಡೆದ ಜಿಆರ್ಪಿ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಕ್ಯಾನಿಂಗ್ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ಕುರಿತು ಜಿಆರ್ಪಿ ಮತ್ತು ಆರ್ಪಿಎಫ್ ತನಿಖೆ ಆರಂಭಿಸಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನೂ ಯಾರ ಬಂಧನವೂ ಆಗಿಲ್ಲ. ಮೊಬೈಲ್ ಮರುಪಡೆಯಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಜಿಆರ್ಪಿ ಸೋನಾರ್ಪುರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.