ಬುಡ್ಗಾಮ್ : ಸುಳ್ಳು ಸುದ್ದಿಗಳು, ತಪ್ಪು ಸುದ್ದಿಗಳು ಯಾವುವು ಎಂದು ನಿರ್ಧರಿಸುವುದಕ್ಕೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಸಮಾಲೋಚನೆ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಭಾನುವಾರ ಹೇಳಿದರು.
ಇಲ್ಲಿ ಕಾನೂನು ನೆರವು ಘಟಕ ಕಚೇರಿಯ ಉದ್ಘಾಟನೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ಚುನಾವಣಾ ಪ್ರಕ್ರಿಯೆಗೆ ಕೆಲವು ತಿದ್ದುಪಡಿಗಳನ್ನು ತರಲು ಉದ್ದೇಶಿಸಲಾಗಿದೆ. ಆದರೆ, ಇದು ಇನ್ನು ಸಮಾಲೋಚನೆ ಹಂತದಲ್ಲಿ ಇರುವ ಕಾರಣ, ತಿದ್ದುಪಡಿಗಳು ಹೀಗೆಯೇ ಇರುತ್ತವೆ ಎಂಬುದಾಗಿ ನಾನು ಹೇಳಲು ಸಿದ್ಧನಿಲ್ಲ' ಎಂದರು.
'ಸುದ್ದಿಗಳಲ್ಲಿ ಯಾವುದು ಸುಳ್ಳು ಅಥವಾ ತಪ್ಪು ಸುದ್ದಿಗಳು, ಯಾವ ಸುದ್ದಿಗಳನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂಬುದನ್ನು ವ್ಯಾಖ್ಯಾನಿಸುವುದು ಮಹತ್ವದ್ದು. ಹೀಗಾಗಿ, ಈ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಸಾಕಷ್ಟು ಸಮಾಲೋಚನೆ ಅಗತ್ಯ' ಎಂದು ರಿಜಿಜು ಹೇಳಿದರು.
ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತಿದ್ದುಪಡಿ ತಂದಿದ್ದು, ಏಪ್ರಿಲ್ 6ರಂದು ಅಧಿಸೂಚನೆ ಪ್ರಕಟಿಸಿದೆ.