ಪಟ್ನಾ: 'ಮೋದಿ' ಉಪ ನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಹಾರದ ಪಟ್ನಾ ನ್ಯಾಯಾಲಯದಲ್ಲಿನ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ಪಟ್ನಾ: 'ಮೋದಿ' ಉಪ ನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಹಾರದ ಪಟ್ನಾ ನ್ಯಾಯಾಲಯದಲ್ಲಿನ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿ ಸಂದೀಪ್ ಕುಮಾರ್ ಅವರು ಈ ಪ್ರಕರಣದ ವಿಚಾರಣೆಗೆ ತಡೆ ನೀಡಿದ್ದು, 'ಇದೇ ರೀತಿಯ ಪ್ರಕರಣದಲ್ಲಿ ಗುಜರಾತ್ ನ್ಯಾಯಾಲಯವು ಈಗಾಗಲೇ ಶಿಕ್ಷೆ ವಿಧಿಸಿದೆ. ಹೀಗಾಗಿ ರಾಹುಲ್ ಗಾಂಧಿಯವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ' ಎಂದು ಪ್ರತಿಪಾದಿಸಿದ್ದಾರೆ.
'ಪ್ರಕರಣದ ವಿಚಾರಣೆಗೆ ಮೇ 15ರವರೆಗೆ ಹೈಕೋರ್ಟ್ ತಡೆ ನೀಡಿದೆ. ಈ ಅರ್ಜಿ ಸಂಬಂಧ ನಿಗದಿತ ದಿನಾಂಕದೊಳಗೆ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ಸಲ್ಲಿಸುತ್ತೇವೆ' ಎಂದು ಅರ್ಜಿದಾರ, ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರನ್ನು ಪ್ರತಿನಿಧಿಸುತ್ತಿರುವ ವಕೀಲ ಎಸ್.ಡಿ. ಸಂಜಯ್ ತಿಳಿಸಿದ್ದಾರೆ.
ಬಿಹಾರದ ಪಟ್ನಾ ಕೋರ್ಟ್ ಇದೇ 25ರಂದು ವಿಚಾರಣೆಗೆ ಖುದ್ದು ಹಾಜರಾಗಲು ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿತ್ತು.
2019ರಲ್ಲಿ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿ ಅವರು 'ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದು ಏಕಿದೆ' ಎಂದು ಪ್ರಚಾರ ಭಾಷಣದಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದಲ್ಲಿ ಸೂರತ್ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅವರು ಲೋಕಸಭಾ ಸದಸ್ಯತ್ವದಿಂದಲೂ ಅನರ್ಹರಾಗಿದ್ದಾರೆ.