ತಿರುವನಂತಪುರ: ಚಲಿಸುತ್ತಿದ್ದ ರೈಲಿಗೆ ಭಾನುವಾರ ರಾತ್ರಿ ಬೆಂಕಿ ಹಚ್ಚಿ ಪರಾರಿಯಾದ ಆಗಂತುಕ ನೋಯ್ಡಾ ನಿವಾಸಿ ಶಾರುಖ್ ಸೈಫ್ ಎಂದು ಪೊಲೀಸರು ಗುರುತಿಸಿರುವುದಾಗಿ ವರದಿಯಾಗಿದೆ. ಶಂಕಿತನ ಚಿತ್ರವನ್ನು ಕೇರಳ ಪೊಲೀಸರು ಸೋಮವಾರ ಬಿಡುಗಡೆ ಮಾಡಿದ್ದರು.
ರೈಲು ಹಳಿ ಬಳಿ ಬಿದ್ದಿದ್ದ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಅದರಲ್ಲಿದ್ದ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ತನಿಖೆ ನಡೆಸಿ, ಈ ಮಹತ್ವದ ಮಾಹಿತಿ ಪತ್ತೆ ಹಚ್ಚಿದ್ದಾರೆ. ಮೊಬೈಲ್ ಅನ್ನು ಮಾರ್ಚ್ 30ರಂದು ಕೊನೆಯದಾಗಿ ಬಳಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಕೃತ್ಯವೆಸಗಿದ ನಂತರ ರೈಲಿನಿಂದ ಜಿಗಿದು ಪರಾರಿಯಾಗಿರುವ ಸೈಫ್, ಕೋಯಿಕ್ಕೋಡ್‌ನಲ್ಲಿ ಕಾರ್ಮಿಕನಾಗಿದ್ದಿರಬಹುದು ಎನ್ನಲಾಗಿದೆ. ಪ್ರಕರಣ ಭೇದಿಸಲು ಹಾಗೂ ಆರೋಪಿಯನ್ನು ಸೆರೆ ಹಿಡಿಯಲು ಆತನ ಸಂಪರ್ಕಗಳ ಜಾಡು ಹಿಡಿಯಲಾಗಿದೆ.
ಸದ್ಯ ಬಿಡುಗಡೆ ಮಾಡಲಾಗಿರುವ ಚಿತ್ರವು, ಆಲಪ್ಪುಳ-ಕಣ್ಣೂರ್ ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್‌ನಲ್ಲಿ ಘಟನೆ ನಡೆದ 2 ಗಂಟೆಗಳ ಬಳಿಕ ಅಂದರೆ, ಭಾನುವಾರ ರಾತ್ರಿ 11.30ರಲ್ಲಿ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವುದಾಗಿದೆ. ಸಿಸಿಟಿವಿ ಮಾತ್ರವಲ್ಲದೆ, ಬೆಂಕಿ ನಂದಿಸಲು ನೆರವಾದ ಹಾಗೂ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರತ್ಯಕ್ಷದರ್ಶಿಗಳಿಂದಲೂ ಶಂಕಿತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ರೈಲು, ರಾತ್ರಿ 9.30ರ ಸುಮಾರಿಗೆ ಕೋಯಿಕ್ಕೋಡ್ ಮತ್ತು ಕಣ್ಣೂರ್ ನಡುವೆ ಇರುವ ಕೊರಪುಳ ಬ್ರಿಡ್ಜ್ ದಾಟುತ್ತಿದ್ದಾಗ ಮಧ್ಯ ವಯಸ್ಕನೊಬ್ಬ ಪ್ರಯಾಣಿಕರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ. ಬೆಂಕಿ ಹೊತ್ತಿಕೊಂಡಾಗ ರೈಲಿನಿಂದ ಜಿಗಿದ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ. 9 ಮಂದಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಕೆಂಪು ಬಣ್ಣದ ಅಂಗಿ ಧರಿಸಿದ್ದ ಮತ್ತು ಗಡ್ಡ ಬಿಟ್ಟಿದ್ದ ಆಗಂತುಕ, ಡಿ2 ಕಂಪಾರ್ಟ್‌ಮೆಂಟ್‌ನಿಂದ ಡಿ1 ಕಂಪಾರ್ಟ್‌ಮೆಂಟ್‌ಗೆ ಬಂದು, ಈ ಕೃತ್ಯವೆಸಗಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆ ನಡೆಯುತ್ತಿದ್ದಂತೆಯೇ, ಇತರ ಪ್ರಯಾಣಿಕರು ತುರ್ತು ನಿಲುಗಡೆ ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ದುಷ್ಕರ್ಮಿಯು, ತಕ್ಷಣವೇ ರೈಲಿನಿಂದ ಜಿಗಿದು ಕತ್ತಲಿನಲ್ಲಿ ನಾಪತ್ತೆಯಾಗಿದ್ದಾನೆ. ಆತ ರೈಲಿನಿಂದ ಜಿಗಿದ 50 ಮೀಟರ್ ದೂರದಲ್ಲಿ ಬೈಕ್‌ನಲ್ಲಿ ಪರಾರಿಯಾಗುತ್ತಿರುವುದು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಬ್ಯಾಗ್ ಮತ್ತು ಸ್ವಿಚ್ ಆಫ್ ಆಗಿದ್ದ ಮೊಬೈಲ್ ಸ್ಥಳದಲ್ಲಿ ಸಿಕ್ಕಿವೆ. ಸಮೀಪದ ತಿರುವನಂತಪುರ ಹಾಗೂ ಕನ್ಯಾಕುಮಾರಿ ಕುರಿತು ಇಂಗ್ಲಿಷ್, ಹಿಂದಿಯಲ್ಲಿ ಬರೆಯಲಾಗಿರುವ ಕಾಗದ, ಒಂದು ಜೊತೆ ಬಟ್ಟೆ, ಕನ್ನಡಕ ಮತ್ತು ಪೆಟ್ರೋಲ್ ತುಂಬಿದ್ದ ಒಂದು ಬಾಟೆಲ್ ಬ್ಯಾಗ್‌ನಲ್ಲಿ ದೊರೆತಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕೃತ್ಯವನ್ನು ಖಂಡಿಸಿದ್ದಾರೆ. ಪೊಲೀಸರು ಶಂಕಿತನನ್ನು ಬಂಧಿಸಲಿದ್ದಾರೆ ಎಂದಿರುವ ಅವರು, ಗಾಯಾಳುಗಳ ಚಿಕಿತ್ಸೆಯನ್ನು ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು, ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವವರಲ್ಲಿ ವಿಶ್ವಾಸ ಮೂಡಿಸಬೇಕಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳು ಜಂಟಿಯಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರು, ಇದು ದೇಶ ವಿರೋಧಿ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.