ನವದೆಹಲಿ: ದೇಶದ ಅತ್ಯಂತ ವೇಗದ 'ವಂದೇ ಭಾರತ್ ಎಕ್ಸ್‌ಪ್ರೆಸ್'ರೈಲುಗಳು ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿದ್ದರೂ ಸಹ ಕಳಪೆ ಟ್ರ್ಯಾಕ್‌ಗಳಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸರಾಸರಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸುತ್ತಿವೆ ಎಂದು ಮಾಹಿತಿ ಹಕ್ಕು(ಆರ್‌ಟಿಐ) ಕಾಯ್ದೆ ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ಕೇಂದ್ರ ಸರ್ಕಾರ ಉತ್ತರ ನೀಡಿರುವುದು ಬಯಲಾಗಿದೆ.
ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಆರ್‌ಟಿಐ ಅರ್ಜಿ ಸಲ್ಲಿಸಿದ್ದು, 2021-22ರ ಅವಧಿಯಲ್ಲಿ ವಂದೇ ಭಾರತ್ ರೈಲುಗಳ ಸರಾಸರಿ ವೇಗ ಗಂಟೆಗೆ 84.48 ಕಿ.ಮೀ ಆಗಿದ್ದು, 2022-23ರಲ್ಲಿ ಗಂಟೆಗೆ 81.38 ಕಿ.ಮೀ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
'ವಂದೇ ಭಾರತ್ ಎಕ್ಸ್‌ಪ್ರೆಸ್', ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುತ್ತಿರುವ ಎಲೆಕ್ಟ್ರಿಕ್ ಬಹು ಘಟಕ ರೈಲು. ಇದನ್ನು ರಿಸರ್ಚ್ ಡಿಸೈನ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (ಆರ್‌ಡಿಎಸ್‌ಒ) ವಿನ್ಯಾಸಗೊಳಿಸಿದ್ದು, ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್) ತಯಾರಿಸಲ್ಪಟ್ಟಿದೆ.
ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯದೊಂದಿಗೆ ವಂದೇ ಭಾರತ್ ರೈಲುಗಳನ್ನು ಸಿದ್ಧಪಡಿಸಲಾಗಿದೆ. ಹಳಿಗಳ ಸಾಮರ್ಥ್ಯದ ಆಧಾರದ ಮೇಲೆ ವಾಣಿಜ್ಯ ಬಳಕೆಯ ರೈಲುಗಳ ವೇಗವನ್ನು 130 ಕಿ.ಮೀಗೆ ಮಿತಿಗೊಳಿಸಲಾಗಿದೆ. ಆದರೆ, ಈ ವೇಗದಲ್ಲಿ ಬಹುತೇಕ ಕಡೆಗಳಲ್ಲಿ ರೈಲುಗಳು ಸಂಚರಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಜಿಎಸ್‌ಎಂಟಿ-ಶ್ರೀನಗರ ಶಿರಡಿ ರೈಲು ಅತ್ಯಂತ ಕಡಿಮೆ(ಗಂಟೆಗೆ 64 ಕಿ.ಮೀ) ಸರಾಸರಿ ವೇಗದ ಸಂಚಾರವನ್ನು ಹೊಂದಿದ್ದರೆ, 2019ರಲ್ಲಿ ಆರಂಭಗೊಂಡ ದೇಶದ ಮೊದಲ ನವದೆಹಲಿ-ವಾರಾಣಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅತ್ಯಂತ ವೇಗದಲ್ಲಿ(ಗಂಟೆಗೆ 95 ಕಿ.ಮೀ) ಸಂಚರಿಸುವ ರೈಲಾಗಿದೆ.