ನವದೆಹಲಿ: ಸಲಿಂಗ ಮದುವೆಗೆ ಮಾನ್ಯತೆ ನೀಡಬೇಕು ಎಂದು ಕೋರಿರುವ ಅರ್ಜಿಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಮದುವೆಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್, ವಿಶೇಷ ವಿವಾಹ ಕಾಯ್ದೆ ಮೇಲೆಯೇ ವಾದ ಮುಂದುವರಿಸುವಂತೆ ವಕೀಲರಿಗೆ ಸೂಚಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರಿದ್ದ ಸಾಂವಿಧಾನಿಕ ಪೀಠವು, ಸಲಿಂಗ ಮದುವೆಗೆ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮಂಗಳವಾರವೂ ನಡೆಸಿತು.
ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಎಸ್.ಆರ್.ಭಟ್, ಹಿಮಾ ಕೊಹ್ಲಿ ಹಾಗೂ ಪಿ.ಎಸ್.ನರಸಿಂಹ ಈ ನ್ಯಾಯಪೀಠದಲ್ಲಿದ್ದಾರೆ.
ಹಿಂದೂ ವಿವಾಹ ಕಾಯ್ದೆ ಹಾಗೂ ಇತರ ಧಾರ್ಮಿಕ ಗುಂಪುಗಳಲ್ಲಿನ ಮದುವೆಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳಲ್ಲಿರುವ ಜಟಿಲತೆಗಳು ಹಾಗೂ ಪರಿಣಾಮಗಳನ್ನು ಪ್ರಸ್ತಾಪಿಸಿದ ನ್ಯಾಯಪೀಠ, 'ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆ ನೀಡಬೇಕು ಎಂದಾದಲ್ಲಿ, ವೈಯಕ್ತಿಕ ಕಾನೂನುಗಳನ್ನು ನಾವು ಪರಿಗಣಿಸಲೇಬಾರದು. ಆಗ, ನಿಮ್ಮ (ವಕೀಲರು) ವಾದ ಸರಣಿ ವಿಶೇಷ ವಿವಾಹ ಕಾಯ್ದೆ ಮೇಲೆಯೇ ಇರಬೇಕಾಗುತ್ತದೆ' ಎಂದು ನ್ಯಾಯಪೀಠ ಹೇಳಿತು.
ವಿಶೇಷ ವಿವಾಹ ಕಾಯ್ದೆ, 1954 'ಧರ್ಮ ತಟಸ್ಥ ವಿವಾಹ ಕಾಯ್ದೆ'ಯಾಗಿದೆ. ಬೇರೆ ಬೇರೆ ಧರ್ಮ, ಜಾತಿಗೆ ಸೇರಿದ ಜನರು ಆಗುವ ಮದುವೆಗೆ ಸಂಬಂಧಿಸಿದ ಕಾನೂನು ಚೌಕಟ್ಟನ್ನು ಈ ಕಾಯ್ದೆ ಒದಗಿಸುತ್ತದೆ. ಈ ಕಾಯ್ದೆಯಡಿ ನೆರವೇರುವ ಮದುವೆಗಳಿಗೆ ಸರ್ಕಾರವೇ ದೃಢೀಕರಣ ನೀಡುತ್ತದೆ.
'ಈ ಅರ್ಜಿಗಳಲ್ಲಿ ಪ್ರಸ್ತಾಪಿಸಲಾಗಿರುವ ವಿಷಯಗಳು ಸಂಕೀರ್ಣವಾಗಿವೆ. ವಿಶೇಷ ವಿವಾಹ ಕಾಯ್ದೆಯಲ್ಲಿ ವಿವರಿಸಿರುವಂತೆ, ಈ ವಿಷಯದಲ್ಲಿ (ಸಲಿಂಗ ಮದುವೆ) ಪುರುಷ ಮತ್ತು ಮಹಿಳೆ ಎಂಬ ಕಲ್ಪನೆಗೆ ಜನನಾಂಗಗಳೆ ಆಧಾರವೆಂದು ಪರಿಗಣಿಸಲು ಆಗುವುದಿಲ್ಲ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
'ಇಲ್ಲಿರುವ ಪ್ರಶ್ನೆ, ಜನನೇಂದ್ರೀಯ ಎಂಥವು ಎಂಬುದಲ್ಲ. ಅದಕ್ಕಿಂತಲೂ ಸಂಕೀರ್ಣವಾದ ಅಂಶಗಳನ್ನು ಈ ವಿಷಯ ಒಳಗೊಂಡಿದೆ' ಎಂದಿತು.
ಲಿಂಗ ಪರಿವರ್ತಿತರ ಕುರಿತು ಪ್ರಸ್ತಾಪಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಸಂಗಾತಿಗಳನ್ನು ಅಯ್ಕೆ ಮಾಡಿಕೊಳ್ಳುವ ಹಕ್ಕು, ಖಾಸಗಿತನ ಹಕ್ಕು, ಲೈಂಗಿಕತೆಯ ಆಯ್ಕೆ ಹಕ್ಕು ಸೇರಿದಂತೆ ಹಲವಾರು ಹಕ್ಕುಗಳಿವೆ. ಈ ವಿಷಯದಲ್ಲಿ ಮಾಡುವ ಯಾವುದೇ ತಾರತಮ್ಯದ ವಿರುದ್ಧ ಕಾನೂನುಕ್ರಮಕ್ಕೆ ಅವಕಾಶ ಇದೆ' ಎಂದರು.
ಆದರೆ, ಮದುವೆಗಳಿಗೆ ಬೇಕಾದ ಸಾಮಾಜಿಕ-ಕಾನೂನಾತ್ಮಕ ಸ್ಥಾನಮಾನವನ್ನು ನ್ಯಾಯಿಕ ನಿರ್ಧಾರಗಳ ಮೂಲಕ ನೀಡಬಾರದು. ಶಾಸಕಾಂಗದಿಂದಲೂ ಇದು ಆಗಬಾರದು. ಇಂಥ ಮದುವೆಗಳನ್ನು ಸ್ವೀಕರಿಸುವ ಮನೋಧರ್ಮ ಸಮಾಜದ ಒಳಗಿನಿಂದಲೇ ಬರಬೇಕು' ಎಂದು ಮೆಹ್ತಾ ಹೇಳಿದರು.
'ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿ ಸಲಿಂಗ ಮದುವೆ ಹಕ್ಕು ಬೇಕು ಹಾಗೂ ಹಿಂದೂವಾಗಿಯೇ ಇರುತ್ತೇನೆ ಎಂದಾಗ ಸಮಸ್ಯೆ ಆರಂಭವಾಗುತ್ತದೆ. ಹಿಂದೂಗಳು, ಮುಸ್ಲಿಮರು ಹಾಗೂ ಇತರ ಸಮುದಾಯಗಳ ಮೇಲೆ ಸಲಿಂಗ ಮದುವೆ ಪದ್ಧತಿ ಪರಿಣಾಮ ಬೀರುತ್ತದೆ. ಹೀಗಾಗಿ, ಈ ವಿಷಯ ಕುರಿತು ಎಲ್ಲ ರಾಜ್ಯಗಳ ಅಹವಾಲು ಆಲಿಸುವುದು ಅಗತ್ಯ' ಎಂದರು.
'ಇದೇ ಕಾರಣಕ್ಕಾಗಿಯೇ ನಾವು ವೈಯಕ್ತಿಕ ಕಾನೂನುಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದರೆ, ಆ ಕಾನುನುಗಳನ್ನು ನಾವು ಪರಿಗಣಿಸಬೇಕು ಎಂದು ನೀವು ಬಯಸುತ್ತಿದ್ದೀರಿ. ಪ್ರತಿಯೊಂದರ ಕುರಿತು ವಿಚಾರಣೆ ನಡೆಸುವಂತೆ ನಮ್ಮನ್ನು ಬಲವಂತ ಮಾಡಬೇಡಿ' ಎಂದು ನ್ಯಾಯಪೀಠ ಹೇಳಿತು.
'ಹಾಗಾದರೆ, ಕೇಂದ್ರದ ನಿಲುವನ್ನು ಆಲಿಸದೇ ನಿರ್ಣಯಿಸದಂತಾಗುತ್ತದೆ' ಎಂದು ಮೆಹ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್, 'ನಾವು ಮಧ್ಯಮ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಒಂದು ವಿಷಯವನ್ನು ಇತ್ಯರ್ಥಪಡಿಸುವ ಸಲುವಾಗಿ ನಾವು ಪ್ರತಿಯೊಂದು ವಿಷಯವನ್ನು ಇತ್ಯರ್ಥಪಡಿಸಬೇಕಾಗಿಲ್ಲ' ಎಂದರು.
ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಕೇಂದ್ರದ ನಿಲುವನ್ನು ಬೆಂಬಲಿಸಿದರು.
ಜಮಿಯತ್-ಉಲೇಮಾ-ಎ-ಹಿಂದ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಅರ್ಜಿದಾರರೊಬ್ಬರ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಬುಧವಾರವೂ ವಿಚಾರಣೆ ಮುಂದುವರಿಯಲಿದೆ.
ಕೇಂದ್ರದ ವಾದಕ್ಕೆ 'ಸುಪ್ರೀಂ' ತೀಕ್ಷ್ಣ ಪ್ರತಿಕ್ರಿಯೆ
'ಸಲಿಂಗ
ಮದುವೆಗೆ ಮಾನ್ಯತೆ ನೀಡುವುದು ಶಾಸಕಾಂಗದ ಕೆಲಸ. ಈ ಕುರಿತು ತಾನು ಎತ್ತಿರುವ
ಆಕ್ಷೇಪವನ್ನು ಪರಿಗಣಿಸಿ, ಮೊದಲು ಈ ವಿಷಯ ಇತ್ಯರ್ಥಪಡಿಸಬೇಕು' ಎಂಬ ಸಾಲಿಟರ್ ಜನರಲ್
ತುಷಾರ್ ಮೆಹ್ತಾ ಮಾತಿಗೆ, ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ
ಸಾಂವಿಧಾನಿಕ ಪೀಠ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.
'ಕ್ಷಮಿಸಿ ಸಾಲಿಟರ್ ಜನರಲ್ ಅವರೇ. ನ್ಯಾಯಾಲಯವು ಮೊದಲು ಅರ್ಜಿದಾರರ ಪರ ವಾದವನ್ನು ಆಲಿಸಲಿದೆ. ನಿಮ್ಮ ಆಕ್ಷೇಪದ ಸ್ವರೂಪ ಹಾಗೂ ಅದು ಸಮರ್ಥನೀಯವೇ ಎಂಬುದು ಅರ್ಜಿದಾರರು ಮಂಡಿಸುವ ವಾದವನ್ನು ಅವಲಂಬಿಸಿದೆ' ಎಂದು ನ್ಯಾಯಪೀಠ ಹೇಳಿತು.
'ನಾವು ಕಲಾಪವನ್ನು ಹೇಗೆ ನಡೆಸಬೇಕು ಎಂಬುದನ್ನು ನೀವು ನಿರ್ದೇಶಿಸಲು ಸಾಧ್ಯವಿಲ್ಲ. ಇಂಥ ಪ್ರಯತ್ನಗಳಿಗೆ ನಾನು ಅವಕಾಶವನ್ನೇ ನೀಡಿಲ್ಲ' ಎಂದು ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, 'ನಾನು ಎಂದೂ ಅಂಥ ಕಾರ್ಯ ಮಾಡಿಲ್ಲ' ಎಂದರು.
'ಅರ್ಜಿದಾರರು ಎತ್ತಿರುವ ವಿಷಯ ಬಹಳ ಸೂಕ್ಷ್ಮವಾಗಿದೆ. ಮೊದಲು ನಮ್ಮ ವಾದವನ್ನು ಆಲಿಸಿದ ನಂತರ ನನಗೆ ಸಮಯ ಕೊಡಿ. ಈ ವಿಷಯ ಕುರಿತು ಮುಂದಿನ ದಿನಗಳಲ್ಲಿ ನಡೆಯುವ ವಿಚಾರಣೆ ವೇಳೆ, ಸರ್ಕಾರದ ನಿಲುವು ಏನಾಗಿರಬೇಕು ಎಂಬ ಬಗ್ಗೆ ನಾವು ಆಲೋಚಿಸಬೇಕು' ಎಂದೂ ಮೆಹ್ತಾ ಹೇಳಿದರು.
'ನಮ್ಮನ್ನು ನಂಬಿ. ನಾವು ವಿಶಾಲ ದೃಷ್ಟಿಕೋನ ಹೊಂದಿದ್ದೇವೆ' ಎಂದು ಸಿಜೆಐ ಹೇಳಿದಾಗ, 'ನಂಬಿಕೆ ಕೊರತೆಗೆ ಸಂಬಂಧಿಸಿ ಪ್ರಶ್ನೆಯೇ ಉದ್ಭವಿಸಿಲ್ಲ' ಎಂದು ಮೆಹ್ತಾ ಪ್ರತಿಕ್ರಿಯಿಸಿದರು.