ನವದೆಹಲಿ: ಸುಡಾನ್‌ನಲ್ಲಿರುವ ಭಾರತೀಯರ ಸ್ಥಿತಿಗತಿ ಕುರಿತು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಸುಡಾನ್‌ನಲ್ಲಿ ಕದನ ವಿರಾಮ ಒಪ್ಪಂದ ಬುಧವಾರ ಮುರಿದು ಬಿದ್ದಿದ್ದು ಮಿಲಿಟರಿ ಪಡೆಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ತಾರಕಕ್ಕೆ ಏರಿದೆ.
ಸೇನಾ ಸಂಘರ್ಷ ಆರನೇ ದಿನಕ್ಕೆ ಕಾಲಿಟ್ಟಿದ್ದು ಮೃತಪಟ್ಟವರ ಸಂಖ್ಯೆ 270ಕ್ಕೂ ಹೆಚ್ಚು ಮಂದಿ ನಾಗರಿಕರು ಮೃತಪಟ್ಟಿದ್ದು, 2,600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸುಡಾನ್‌ನಲ್ಲಿ ವಿದ್ಯುತ್ ಹಾಗೂ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ತೀವ್ರ ಆಹಾರದ ಕೊರತೆ ತಲೆದೋರಿದ್ದು ನಾಗರಿಕರು ಹಸಿವಿನಿಂದ ಬಳಲುವಂತಾಗಿದೆ. ಇದರ ಲಾಭ ಪಡೆದಿರುವ ದುಷ್ಕರ್ಮಿಗಳು ಜನರ ಮೇಲೆ ಹಲ್ಲೆ ಹಾಗೂ ಲೂಟಿಗೆ ಇಳಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷ ಶಮನಗೊಳಿಸಲು ಕದನ ವಿರಾಮ ಸ್ಥಾಪನೆಗಾಗಿ ವಿಶ್ವಸಂಸ್ಥೆಯು ಗಂಭೀರ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಕದನ ವಿರಾಮ ಸ್ಥಾಪನೆ ನಿಜಕ್ಕೂ ಅಗತ್ಯವಾಗಿದೆ. ಏಕೆಂದರೆ, ಈ ಸಮಯದಲ್ಲಿ ಕದನ ವಿರಾಮ ಜಾರಿಯಾಗದೆ, ಮಾನವೀಯ ಕಾರಿಡಾರ್‌ಗಳನ್ನು ತೆರೆಯದೇ ಜನರು ಹೊರಬರುವುದು ಸುರಕ್ಷಿತವಲ್ಲ ಎಂದು ಜೈಶಂಕರ್ ತಿಳಿಸಿದ್ದಾರೆ.
ಸಂಘರ್ಷಕ್ಕೆ ಕಾರಣವೇನು?
ಸುಡಾನ್‌ನ ರಾಜಕೀಯ
ಸ್ಥಿತ್ಯಂತರಗಳಲ್ಲಿ ಸೇನೆಯ ಪಾತ್ರ ಕಂಡುಬರುತ್ತಿರುವುದು ಇದೇ ಮೊದಲೇನಲ್ಲ.
ಪ್ರಜಾಸತ್ತಾತ್ಮಕ ಆಡಳಿತ ಸ್ಥಾಪಿಸಬೇಕೆಂಬ ಅಲ್ಲಿನ ನಾಗರಿಕರ ಆಸೆ ಇಂದಿಗೂ ಕೈಗೂಡಿಲ್ಲ.
2021ರಲ್ಲಿ ಕ್ಷಿಪ್ರ ಕ್ರಾಂತಿ ಮೂಲಕ ಅಲ್ಲಿನ ದೀರ್ಘಕಾಲದ ಸರ್ವಾಧಿಕಾರಿ ಒಮರ್ ಅಲ್ ಬಶೀರ್ ಅವರ ಪತನವಾಯಿತು. ಸುಡಾನ್ ಮಿಲಿಟರಿ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್ ಬುಹ್ರಾನ್ ಹಾಗೂ ಅರೆಸೇನಾ ಪಡೆ ಮುಖ್ಯಸ್ಥ ಮೊಹಮ್ಮದ್ ಹಮದಾನ್ ದಾಗಲೊ ಈ ದಂಗೆಯ ನೇತೃತ್ವವಹಿಸಿದ್ದರು.
ಸೇನೆಯು ಅಧಿಕಾರದ ಚುಕ್ಕಾಣಿ ಹಿಡಿಯಿತು. ಅಬ್ದೆಲ್ ಕೂಡ ಶೀಘ್ರವೇ ನಾಗರಿಕ ಜನತಂತ್ರ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಬ್ಬರಿಗೂ ಅಧಿಕಾರ ತ್ಯಜಿಸುವ ಉದ್ದೇಶವಿಲ್ಲ. ಮತ್ತೊಂದೆಡೆ ದೇಶದ ಸೇನಾ ಪಡೆಯೊಂದಿಗೆ ಅರೆಸೇನಾ ಪಡೆಯನ್ನು ಏಕೀಕರಣಗೊಳಿಸಬೇಕು ಎಂಬುದು ಮೊಹಮ್ಮದ್ ಹಮದಾನ್ ದಾಗಲೊ ಬೇಡಿಕೆ. ಇದಕ್ಕೆ ಅಬ್ದೆಲ್ ಒಪ್ಪುತ್ತಿಲ್ಲ. ಅಧಿಕಾರಕ್ಕಾಗಿನ ಇಬ್ಬರ ಕಿತ್ತಾಟದಿಂದ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.
ಅಲ್ಲದೇ, ಅರೆಸೇನಾ ಪಡೆಯು ಖಾರ್ಟೂಮ್‌ನಲ್ಲಿ ಸೇನಾ ಪಡೆಯ ಅನುಮತಿ ಇಲ್ಲದೆಯೇ ತನ್ನ ಸದಸ್ಯರನ್ನು ನಿಯೋಜಿಸಿದ್ದು, ಬಿಕ್ಕಟ್ಟು ಉಲ್ಬಣಿಸಲು ಕಾರಣವಾಗಿದೆ. ಮತ್ತೊಂಡೆದೆ ಅಮೆರಿಕ ಮತ್ತು ರಷ್ಯಾ ಸುಡಾನ್ ಮೇಲೆ ಹಿಡಿತ ಸಾಧಿಸಲು ಸ್ಪರ್ಧೆಗಿಳಿದಿರುವುದು ಕೂಡ ಅಲ್ಲಿ ಅರಾಜಕತೆ ಸೃಷ್ಟಿಗೆ ಕಾರಣವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.