ನವದೆಹಲಿ: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವುದು ಅತ್ಯಂತ ಆಕ್ಷೇಪಾರ್ಹ ಸಂಗತಿ. ಹಾಗಾಗಿ ಇಂಥ ವಿವಾಹವನ್ನು ಕಾನೂನುಬದ್ಧಗೊಳಿಸಬಾರದು ಎಂದು ಕೋರಿ ರಾಷ್ಟ್ರಪತಿ ದ್ರೌಪರಿ ಮುರ್ಮು ಅವರಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಅಧಿಕಾರಿಗಳು ಸೇರಿದಂತೆ ಒಟ್ಟು 120 ಗಣ್ಯ ನಾಗರಿಕರು ಪತ್ರ ಬರೆದಿದ್ದಾರೆ.
ಏಪ್ರಿಲ್ 27ರಂದು ರಾಷ್ಟ್ರಪತಿಗಳಿಗೆ ಈ ಪತ್ರ ಬರೆಯಲಾಗಿದ್ದು, ಪತ್ರದಲ್ಲಿ 120 ಗಣ್ಯರ ನಾಗರಿಕರ ಸಹಿ ಇದೆ. ನಿವೃತ್ತ ಕಂಟ್ರೋಲರ್, ಆಡಿಟರ್ ಜನರಲ್ (ಸಿಎಜಿ) ರಾಜೀವ್ ಮೆಹ್ರಿಷಿ, ಮಾಜಿ ಗೃಹ ಕಾರ್ಯದರ್ಶಿ ಎಲ್.ಸಿ. ಗೋಯೆಲ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಶಶಾಂಕ್, 'ರಾ'ದ ಮಾಜಿ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ನಿವೃತ್ತ ನ್ಯಾಯಮೂರ್ತಿಗಳಾದ ಎಸ್.ಎನ್. ಧಿಂಗ್ರಾ ಮತ್ತು ಲೋಕ್‌ಪಾಲ್ ಸಿಂಗ್ ಸೇರಿದಂತೆ ಅನೇಕರು ಪತ್ರಕ್ಕೆ ಸಹಿ ಹಾಕಿದ್ದಾರೆ.
'ಭಾರತೀಯ ಸಮಾಜ ಹಾಗೂ ಸಂಸ್ಕೃತಿಯು ಸಲಿಂಗ ವಿವಾಹ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅದು ಅಸ್ವಾಭಾವಿಕವಾಗಿದೆ' ಎಂದೂ ನಾಗರಿಕರು ಪತ್ರದಲ್ಲಿ ಹೇಳಿದ್ದಾರೆ.
'ದೇಶದ ಮೂಲ ಸಂಪ್ರದಾಯಗಳು ಮತ್ತು ಧಾರ್ಮಿಕ ಸಿದ್ಧಾಂತಗಳ ವಿರುದ್ಧ ನಿರಂತರ ಆಕ್ರಮಣ ಹಾಗೂ ನಿರ್ದಿಷ್ಟವಾಗಿ ಸಲಿಂಗ ಒಕ್ಕೂಟವನ್ನು ಕಾನೂನುಬದ್ಧಗೊಳಿಸುವ ಆಕ್ಷೇಪಾರ್ಹ ಪ್ರಯತ್ನಗಳ ಕುರಿತು ಆಘಾತಗೊಂಡಿದ್ದೇವೆ' ಎಂದು ಪತ್ರಕ್ಕೆ ಸಹಿ ಮಾಡಿದವರು ತಿಳಿಸಿದ್ದಾರೆ.
'ಇಂಥ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಸಾಂವಿಧಾನ ಪೀಠವು ಪರಿಗಣಿಸುತ್ತಿದೆ. ಈಗಾಗಲೇ ಭಾರತೀಯ ಮೌಲ್ಯಗಳಿಂದ 'ವಿಚ್ಛೇದನ' ಪಡೆದಿರುವ ಪ್ರಗತಿಪರ ಮತ್ತು ವಿಮೋಚನಾ ಚಿಂತನೆಯಲ್ಲಿರುವ ಕೆಲವು ವಿಶಿಷ್ಟ ಹುಸಿ ಉದಾರವಾದಿಗಳಿಗೆ ಈ ಸಂಗತಿಯು ತಮ್ಮ ಹೋರಾಟವನ್ನು ಪುನರಾರಂಭಿಸುವ ವಿಷಯವಾಗಿದೆ' ಎಂದೂ ನಾಗರಿಕರು ಹೇಳಿದ್ದಾರೆ.
'ಮಾರ್ಗ ಮುರಿಯುವ ವಿಧಾನ'ದ ಹೆಸರಿನಲ್ಲಿ ಇಂಥ ಸಾಂಸ್ಕೃತಿಕ ವಿನಾಶಕಾರಿ ಹೆಜ್ಜೆಯ ನಿಖರವಾದ ಅಂದಾಜು ಮತ್ತು ಫಲಿತಾಂಶವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸುವುದು ಅಗತ್ಯ. ಸಲಿಂಗ ಲೈಂಗಿಕ ಒಕ್ಕೂಟವನ್ನು ತರ್ಕಬದ್ಧ, ಸ್ವೀಕಾರಾರ್ಹ, ನೈತಿಕವಾಗಿಸಿಲು ಕಾನೂನು ಪರಿಷ್ಕರಣೆಯಾದಲ್ಲಿ ಅದು ಸಲಿಂಗ ಲೈಂಗಿಕ ಸಂಸ್ಕೃತಿಗೆ ಬಾಗಿಲು ತೆರೆಯುತ್ತದೆ. ನಮ್ಮ ಸಮಾಜ ಮತ್ತು ಸಂಸ್ಕೃತಿಯು ಇಂಥ ಸಲಿಂಗ ವರ್ತನೆಯನ್ನು ಒಪ್ಪಿಕೊಳ್ಳದು. ಏಕೆಂದರೆ ಇದು ನಮ್ಮ ಮೌಲ್ಯಗಳ ಮೇಲಿನ ಆಕ್ರಮಣಕಾರಿಯಾಗಿದೆ. ಸಲಿಂಗ ಲೈಂಗಿಕ ಸಂಬಂಧವು ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದರೂ, ಈ ಸಂಬಂಧವು ದೀರ್ಘಕಾಲೀನ ಅಥವಾ ಸ್ಥಿರವಾದ ಸಂಸ್ಥೆಗಳನ್ನು ರಚಿಸಲು ಸಾಧ್ಯವಿಲ್ಲ' ಎಂದೂ ಪತ್ರದಲ್ಲಿ ವಿಶ್ಲೇಷಿಸಲಾಗಿದೆ.
'ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ದೊರೆತರೆ ಖಂಡಿತವಾಗಿಯೂ ಸಲಿಂಗಕಾಮಿಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಇದು ಸಮಾಜ ಮತ್ತು ಕುಟುಂಬ ವ್ಯವಸ್ಥೆಯನ್ನು ಸರಿಪಡಿಸಲಾಗದಂತೆ ನಾಶಪಡಿಸುತ್ತದೆ' ಎಂದೂ ನಾಗರಿಕರು ಪತ್ರದಲ್ಲಿ ಆಂತಕ ವ್ಯಕ್ತಪಡಿಸಿದ್ದಾರೆ.