ನವದೆಹಲಿ: ಭಾರತ ಮತ್ತು ಮಲೇಷ್ಯಾ ದೇಶಗಳು ತಮ್ಮ ವ್ಯಾಪಾರ ವಹಿವಾಟಿಗೆ ಇತರ ಕರೆನ್ಸಿಗಳ ಜೊತೆಗೆ ಭಾರತೀಯ ರೂಪಾಯಿಯನ್ನು ಬಳಸಬಹುದು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಶನಿವಾರ ತಿಳಿಸಿದೆ.
ಕಳೆದ ವರ್ಷ ಜುಲೈನಲ್ಲಿ ಭಾರತೀಯ ಕರೆನ್ಸಿಯಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ವಹಿವಾಟಿಗೆ ಅವಕಾಶ ನೀಡುವ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
'ಭಾರತ ಮತ್ತು ಮಲೇಷ್ಯಾ ನಡುವಿನ ವ್ಯಾಪಾರ ವಹಿವಾಟಿಗೆ ಇತರ ಕರೆನ್ಸಿಗಳ ಜೊತೆಗೆ ಭಾರತೀಯ ರೂಪಾಯಿಯನ್ನು ಬಳಸಬಹುದು' ಎಂದು ಸಚಿವಾಲಯ ತಿಳಿಸಿದೆ.
'ಜುಲೈ 2022ರಲ್ಲಿ ಭಾರತೀಯ ರೂಪಾಯಿಯಲ್ಲಿ ಅಂತರರಾಷ್ಟ್ರೀಯ ವ್ಯಾಪಾರವನ್ನು ನಡೆಸಲು ಅನುವುಮಾಡಿಕೊಡಲು ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡ ನಿರ್ಧಾರಕ್ಕೆ ಅನುಗುಣವಾಗಿದೆ' ಎಂದು ಸಚಿವಾಲಯ ಹೇಳಿದೆ.
ಆರ್‌ಬಿಐನ ಈ ಉಪಕ್ರಮವು ವ್ಯಾಪಾರದ ಬೆಳವಣಿಗೆಯನ್ನು ಸುಲಭಗೊಳಿಸುವ ಮತ್ತು ಭಾರತೀಯ ರೂಪಾಯಿಯಲ್ಲಿ ಜಾಗತಿಕ ವ್ಯಾಪಾರ ಸಮುದಾಯದ ಹಿತಾಸಕ್ತಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ ಎಂದು ಸಚಿವಾಲಯ ಹೇಳಿಕೊಂಡಿದೆ.
ಕೌಲಾಲಂಪುರದಲ್ಲಿರುವ ಇಂಡಿಯಾ ಇಂಟರ್‌ನ್ಯಾಶನಲ್ ಬ್ಯಾಂಕ್ ಆಫ್ ಮಲೇಷಿಯಾ (ಐಐಬಿಎಂ), ಭಾರತದಲ್ಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ವಿಶೇಷ ರೂಪಾಯಿ ವೋಸ್ಟ್ರೋ ಖಾತೆ ತೆರೆಯುವ ಮೂಲಕ ಈ ಕಾರ್ಯವಿಧಾನವನ್ನು ಕಾರ್ಯಗತಗೊಳಿಸಿದೆ.