ನವದೆಹಲಿ: ಆಯಪ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಬಂದ ಬಳಿಕ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಜನವರಿ ಮತ್ತು ಫೆಬ್ರುವರಿಯಲ್ಲಿ ಸೃಷ್ಟಿಯಾದ ಕೆಲಸದ ದಿನಗಳ ಸಂಖ್ಯೆಯಲ್ಲಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಇಳಿಕೆ ಕಂಡುಬಂದಿದೆ ಎಂದು ನರೇಗಾ ಸಂಘರ್ಷ ಮೋರ್ಚಾ ತಿಳಿಸಿದೆ.
ನೂತನ ಆಯಪ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ವಿರೋಧಿಸಿ ಇಲ್ಲಿನ ಜಂತರ್-ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಮೋರ್ಚಾ, ಈ ಕುರಿತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ಮೋರ್ಚಾ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷ ಜನವರಿ ಮತ್ತು ಫೆಬ್ರುವರಿ ಅವಧಿಯಲ್ಲಿ 53.07 ಕೋಟಿ ಕೆಲಸದ ದಿನಗಳು ಸೃಷ್ಟಿಯಾಗಿದ್ದವು. ಈ ವರ್ಷದ ಅದೇ ಅವಧಿಯಲ್ಲಿ 34.59 ಕೋಟಿ ಕೆಲಸದ ದಿನಗಳು ಸೃಷ್ಟಿಯಾಗಿವೆ.
2021ರಲ್ಲಿ ಇದೇ ಅವಧಿಯಲ್ಲಿ 56.94 ಕೋಟಿ ಕೆಲಸದ ದಿನಗಳು ಸೃಷ್ಟಿಯಾಗಿದ್ದವು ಎಂದೂ ಮೋರ್ಚಾ ಹೇಳಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಸಮರ್ಪಕವಾಗಿ ಇಲ್ಲದ ಕಾರಣ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (ಆನ್‌ಲೈನ್ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ) ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಹೀಗಾಗಿ ಈ ವ್ಯವಸ್ಥೆಯನ್ನು ವಾಪಸು ತೆಗೆದುಕೊಳ್ಳುವಂತೆ ನರೇಗಾ ಕಾರ್ಮಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು(ಎಬಿಪಿಎಸ್) ಕಡ್ಡಾಯ ಮಾಡಲಾಗಿದೆ. ಹಲವಾರು ಕಾರ್ಮಿಕರ ಬಳಿ ಎಬಿಪಿಎಸ್ ಖಾತೆ ಇಲ್ಲ ಎಂಬುದು ಕಾರ್ಮಿಕರ ಅಳಲಾಗಿದೆ.