ವಿಶ್ವಸಂಸ್ಥೆ :ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಆ ಮೂಲಕ ಜನಸಂಖ್ಯೆಯಲ್ಲಿ ನೆರೆಯ ದೇಶ ಚೀನಾವನ್ನೇ ಹಿಂದಿಕ್ಕಿದೆ. ಭಾರತ 142.86 ಕೋಟಿ ಜನಸಂಖ್ಯೆ ಹೊಂದಿದ್ದರೆ, ಚೀನಾ 142.57 ಕೋಟಿ ಜನಸಂಖ್ಯೆ ಹೊಂದಿದೆ.
ಭಾರತದ ಜನಸಂಖ್ಯೆಯ ಸುಮಾರು 1/4 ರಷ್ಟು ಜನರು 14 ವರ್ಷದ ಒಳಗಿನವರಾಗಿದ್ದಾರೆ. ಜನಸಂಖ್ಯೆಯ ಶೇಕಡಾ 68ರಷ್ಟು ಜನರು 15 ರಿಂದ 64 ವಯಸ್ಸಿನವರಾಗಿದ್ದರೆ, ಶೇಕಡಾ 7ರಷ್ಟು ಜನರು 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಚೀನಾದಲ್ಲಿ ವಯಸ್ಕರ ಪ್ರಮಾಣ ಹೆಚ್ಚಿದ್ದರೆ, ಭಾರತ ಯುವ ಶಕ್ತಿಯಿಂದ ಕೂಡಿದೆ ಎಂದು ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ. ವಯಸ್ಕರ ಪ್ರಮಾಣದಲ್ಲಿ ಏರಿಕೆಯಾಗಿದೆ. ಜನನ ಪ್ರಮಾಣವನ್ನು ಹೆಚ್ಚಿಸಲು ಚೀನಾ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿತ್ತು. ಆದರೆ, ಈ ಯಾವ ಯೋಜನೆಗಳೂ ಉದ್ದೇಶಿತ ಫಲಿತಾಂಶವನ್ನು ನೀಡಿರಲಿಲ್ಲ.
1950ರಿಂದಲೂ ವಿಶ್ವಸಂಸ್ಥೆ ಎಲ್ಲ ದೇಶಗಳ ಜನಸಂಖ್ಯೆಯ ಪ್ರಮಾಣವನ್ನು ಬಿಡುಗಡೆ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಭಾರತ ಎಲ್ಲ ದೇಶಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಭಾರತ ಸರ್ಕಾರ ಜನಗಣತಿ ನಡೆಸುತ್ತಾ ಬಂದಿದೆ. 2011ರಲ್ಲಿ ಜನಗಣತಿ ನಡೆಸಿದ್ದು, ಕೊರೊನಾ ಕಾರಣಕ್ಕೆ 2021ರಲ್ಲಿ ನಡೆಯಬೇಕಿದ್ದ ಜನಗಣತಿ ಪ್ರಕ್ರಿಯೆ ನಿಂತು ಹೋಗಿತ್ತು. ಈ ಕಾರಣಕ್ಕೆ ಭಾರತದಲ್ಲಿ ಎಷ್ಟು ಜನಸಂಖ್ಯೆ ಪ್ರಮಾಣ ಹೆಚ್ಚಿದೆ ಎಂಬ ಮಾಹಿತಿ ತಿಳಿದಿರಲಿಲ್ಲ.
ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಇನ್ನೂ ಮೂರು ದಶಕಗಳ ಕಾಲ ಭಾರತದ ಜನಸಂಖ್ಯೆ ಏರಿಕೆಯಾಗಲಿದೆ. ಭಾರತದ ಜನಸಂಖ್ಯೆ 165 ಕೋಟಿ ತಲುಪಿದ ನಂತರ ಜನಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.