ನವದೆಹಲಿ: 'ನೀವು ಯಾವಾಗಲೂ ಬಿಜೆಪಿ ಹೇಳಿದ್ದನ್ನೇ ಯಾಕೆ ಹೇಳುತ್ತೀರಿ...?' - ಇದು, ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಮರು ಪ್ರಶ್ನೆ ಹಾಕಿದ ಪರಿ.
ಮಾಧ್ಯಮ ಪ್ರತಿನಿಧಿಗಳನ್ನು ಈ ರೀತಿ ಪ್ರಶ್ನಿಸಿದ್ದಕ್ಕಾಗಿ ರಾಹುಲ್ ವಿರುದ್ಧ ಬಿಜೆಪಿ ಟೀಕಾಪ್ರಹಾರ ಮಾಡಿದೆ.
ಇಲ್ಲಿ, ಪಕ್ಷದ ಕೇಂದ್ರ ಕಚೇರಿಯನ್ನು ಪ್ರವೇಶಿಸುತ್ತಿದ್ದ ರಾಹುಲ್ ಅವರಿಗೆ ಮಾಧ್ಯಮ ಪ್ರತಿನಿಧಿಯೊಬ್ಬರು, 'ಮಾನನಷ್ಟ ಮೊಕದ್ದಮೆಯಲ್ಲಿ ಜೈಲು ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಸೂರತ್‌ನ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಇದು ನ್ಯಾಯಾಂಗದ ಮೇಲೆ ಒತ್ತಡ ಹೇರುವ ತಂತ್ರವಾಗಿತ್ತು ಎಂಬುದಾಗಿ ಬಿಜೆಪಿ ಆರೋಪಿಸಿದೆ. ಇದಕ್ಕೆ ಏನು ಹೇಳುತ್ತೀರಿ' ಎಂದು ಕೇಳಿದರು.
ಆಗ, ಒಂದೆರಡು ಹೆಜ್ಜೆ ಹಿಂದಕ್ಕೆ ಬಂದ ರಾಹುಲ್, 'ಬಿಜೆಪಿ ಹೇಳಿದ್ದನ್ನೇ ನೀವು ಯಾಕೆ ಹೇಳುತ್ತೀರಿ? ಪ್ರತಿ ಬಾರಿಯೂ ಬಿಜೆಪಿ ಏನು ಹೇಳುತ್ತದೆಯೋ ನೀವೂ ಅದನ್ನೇ ಹೇಳುತ್ತೀರಲ್ಲ' ಎಂದು ಮರುಪ್ರಶ್ನೆ ಹಾಕಿದರು.
'ನನ್ನ ಪ್ರಶ್ನೆ ಬಹಳ ಸರಳ. ಅದಾನಿಗೆ ಸೇರಿದ ಶೆಲ್ ಕಂಪನಿಗಳಲ್ಲಿ ಹೂಡಿಕೆಯಾಗಿರುವ ₹ 20 ಸಾವಿರ ಕೋಟಿ ಯಾರಿಗೆ ಸೇರಿದ್ದು? ಇದು ಬೇನಾಮಿ ಹಣ' ಎನ್ನುವ ಮೂಲಕ ರಾಹುಲ್ ಅವರು ತಮ್ಮ ಆರೋಪಗಳನ್ನು ಪುನರುಚ್ಚರಿಸಿದರು.
ನಂತರ, ಟ್ವೀಟ್ ಮಾಡಿದ ಅವರು, 'ಇದೇ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನಕ್ಕೆ ಶರಣಾಗಿದ್ದಾರೆ? ಅವರು ಯಾಕೆ ಹೆದರಿದ್ದಾರೆ' ಎಂದು ಪ್ರಶ್ನಿಸಿದ್ದಾರೆ.
ಟೀಕೆ: ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಮರುಪ್ರಶ್ನೆ ಹಾಕಿದ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಮುಖ್ಯ ವಕ್ತಾರ ಅನಿಲ್ ಬಲೂನಿ, 'ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲೆ ರಾಹುಲ್ ಗಾಂಧಿ ಮತ್ತೊಮ್ಮೆ ಆಕ್ರಮಣ ನಡೆಸಿದ್ದಾರೆ. ದೇಶದ ಹಿಂದುಳಿದ ವರ್ಗಗಳು ಹಾಗೂ ಮಾಧ್ಯಮವನ್ನು ಅವಮಾನಿಸುವುದು ರಾಹುಲ್ ಅವರ ಮನಸ್ಥಿತಿಯಾಗಿದೆ' ಎಂದಿದ್ದಾರೆ.
'ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಪದೇಪದೇ ಆಕ್ರಮಣ ಮಾಡುವ ಮೂಲಕ ರಾಹುಲ್ ಅವರು ತಮ್ಮ ಅಜ್ಜಿ ಸಾಗಿದ ದಾರಿಯಲ್ಲೇ ಹೆಜ್ಜೆ ಹಾಕುತ್ತಿದ್ದಾರೆ' ಎಂದೂ ಛೇಡಿಸಿದ್ದಾರೆ.
'ರಾಹುಲ್ ಒಬ್ಬ ದುರಹಂಕಾರಿ ಮನೆತನಕ್ಕೆ ಸೇರಿದವರು' ಎಂದು ಬಿಜೆಪಿಯ ಮತ್ತೊಬ್ಬ ವಕ್ತಾರ ಶೆಹಜಾದ್ ಪೂನಾವಾಲಾ ಟೀಕಿಸಿದ್ದಾರೆ.