ನವದೆಹಲಿ: ಯಾರೇ ಆಗಲಿ ವಿದೇಶ ಪ್ರವಾಸ ಕೈಗೊಳ್ಳುವಾಗ 'ರಾಜಕೀಯ ದೃಷ್ಟಿಕೋನಗಳನ್ನು' ಬಿಟ್ಟುಬಿಡಬೇಕು ಎಂದು ಉಪ ರಾಷ್ಡ್ರಪತಿ ಜಗದೀಪ್ ಧನಕರ್ ಸೋಮವಾರ ಹೇಳಿದರು.
ಇತ್ತೀಚೆಗೆ ಬ್ರಿಟನ್ ಪ್ರವಾಸದಲ್ಲಿ ರಾಹುಲ್ ಗಾಂಧಿ ಅವರು ಮಾಡಿದ್ದ ಭಾಷಣದ ಹಿನ್ನೆಲೆಯಲ್ಲಿ ಧನಕರ್ ಈ ಹೇಳಿಕೆ ನೀಡಿದರು.
ಅವರು ಇಲ್ಲಿ ವಿಶ್ವ ಹೋಮಿಯೋಪತಿ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು.
2047ರ ಹೊತ್ತಿಗೆ ಸ್ವಾತಂತ್ರ್ಯ ಸಂಭ್ರಮ ಆಚರಿಸುವ ಭಾರತದ ಘನತೆಯ ಮೇಲೆ ನಡೆಯುವ ದಾಳಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಧನಕರ್ ಎಚ್ಚರಿಸಿದರು.
'ವಿಶ್ವದಲ್ಲೇ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಗಣ್ಯರು ಅಥವಾ ವಿದೇಶಿ ಪ್ರಜೆಗಳು ತಮ್ಮ ರಾಷ್ಟ್ರವನ್ನು ಟೀಕಿಸುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ನಮ್ಮ ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರ ಬಗ್ಗೆ ನಾವು ಏಕೆ ಹೆಮ್ಮೆ ಪಡಬಾರದು? ನಮ್ಮ ಆವಿಷ್ಕಾರವನ್ನು ನಾವು ಯಾಕೆ ಅಭಿನಂದಿಸಬಾರದು?' ಎಂದು ಧನಕರ್ ಪ್ರಶ್ನಿಸಿದರು.
'ನಾವು ವಿದೇಶ ಪ್ರವಾಸ ಕೈಗೊಳ್ಳುವಾಗ ರಾಜಕೀಯ ದೃಷ್ಟಿಕೋನವನ್ನು ಬಿಟ್ಟುಬಿಡಬೇಕು. ಇದರಿಂದ ದೇಶಕ್ಕೆ ಮತ್ತು ವ್ಯಕ್ತಿಗೇ ಪ್ರಯೋಜನಕಾರಿ' ಎಂದು ವಿವರಿಸಿದರು.