HEALTH TIPS

ಅಮಲು ಭರಿಸುವ ತಂಬಾಕು ವಾಸನೆಯ ಗದ್ದೆಗಳು: ಕಾಸರಗೋಡಿನ ಹೆಮ್ಮೆಯ ಕೃಷಿ ಉತ್ಪನ್ನ ಅವನತಿಯತ್ತ


                   ಮುಳ್ಳೇರಿಯ: ವಿಶ್ವ ಕೃಷಿ ಭೂಪಟದಲ್ಲಿ ಸ್ಥಾನ ಪಡೆದಿರುವ ಕಾಸರಗೋಡು ತಂಬಾಕು ಇಂದು ಗಣನೀಯ ಕುಸಿತದ ಹಂತದಲ್ಲಿದೆ. ಕಾಸರಗೋಡಿನ ಜನರು ಪುಗರೆ, ಚಪ್ಪು ಎಂದೆಲ್ಲ ಕರೆಯುವ ತಂಬಾಕು ಬೆಳೆಯುವ ಕೇರಳದ ಏಕೈಕ ಜಿಲ್ಲೆ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತಂಬಾಕು ಉತ್ಪನ್ನಗಳ ವಿರುದ್ಧ ವ್ಯಾಪಕ ಜಾಗೃತಿ ಮತ್ತು ಹೊಸ ಪೀಳಿಗೆ ತಂಬಾಕು ಕೃಷಿಯಿಂದ ವಿಮುಖರಾಗಿರುವುದು ಕೃಷಿಯ ಅವನತಿಗೆ ಪ್ರಮುಖ ಕಾರಣವಾಗಿದೆ. ಮಧ್ಯವರ್ತಿಗಳ ಶೋಷಣೆ, ಸರ್ಕಾರದಿಂದ ಯಾವುದೇ ಪ್ರಯೋಜನವಾಗದಿರುವುದು ರೈತರಿಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ಈ ಭಾಗದ ಜನರು.
          ಜಿಲ್ಲೆಯ ಪಳ್ಳಿಕ್ಕೆರೆ, ಉದುಮ, ಅಜಾನೂರು ಮತ್ತು ಪುಲ್ಲೂರು-ಪೆರಿಯ ಪಂಚಾಯತಿಗಳಲ್ಲಿ ಒಂದು ಕಾಲದಲ್ಲಿ ವ್ಯಾಪಕವಾಗಿ ತಂಬಾಕು ಕೃಷಿ ಇತ್ತು. ಹಸಿರು-ಹಸಿರಾಗಿ ಕಂಗೊಳಿಸುತ್ತಿದ್ದ ಗದ್ದೆಗಳು ದಕ್ಷಿಣ ಕೇರಳದ ರೈಲು ಪ್ರಯಾಣಿಕರಿಗೆ ಉಲ್ಲಾಸಕರ ದೃಶ್ಯವಾಗಿತ್ತು.
           17 ನೇ ಶತಮಾನದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ತಂಬಾಕು ಕೃಷಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಇತರ ಕೃಷಿ ಉತ್ಪನ್ನಗಳಿಗಿಂತ ಹೊಗೆಸೊಪ್ಪು 10 ಪಟ್ಟು ಹೆಚ್ಚು ಲಾಭಕರ ಮತ್ತು ಉತ್ತಮ ಫಸಲುಯುಕ್ತವಾಗಿತ್ತು. ಆದ್ದರಿಂದ, ಈಸ್ಟ್ ಇಂಡಿಯಾ ಕಂಪನಿಯು 19 ನೇ ಶತಮಾನದ ಆರಂಭದಲ್ಲಿ ತಂಬಾಕು ವ್ಯಾಪಾರದ ಏಕಸ್ವಾಮ್ಯವನ್ನು ಹೊಂದಿತ್ತು ಎಂದು ಇತಿಹಾಸ ಹೇಳುತ್ತದೆ.
            ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಇಲ್ಲಿ ತಂಬಾಕು ಕೃಷಿ ಪ್ರಾರಂಭವಾಗುತ್ತದೆ. ಬಿತ್ತಿದ ನಂತರ ಸುಗ್ಗಿಯ ಕಾಲದವರೆಗೆ ಕಷ್ಟದ ನಿರ್ವಹಣೆ ಬೇಕಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ನೀರು ಹಾಕಬೇಕು ಎಂಬುದು ಹೊಗೆಸೊಪ್ಪು ಕೃಷಿಯ ಮುಖ್ಯ ಕೃಷಿತಂತ್ರ. ನೇರ ಸೂರ್ಯನ ಬೆಳಕನ್ನು ತಡೆಯಲು ಚಪ್ಪರ ವ್ಯವಸ್ಥೆ ಮಾಡಬೇಕಾಗುತ್ತದೆ. ಕೃಷಿಗೆ ಸಗಣಿ ಮತ್ತು ಸೊಪ್ಪು ಮಿಶ್ರಿತ ಗೊಬ್ಬರ ಮತ್ತು ಮೀನಿನ ಗೊಬ್ಬರವನ್ನು ಬಳಸಲಾಗುತ್ತದೆ. ಗಿಡಗಳು 90 ದಿನಗಳಾಗುವಾಗ ಕೊಯ್ಲು ಪ್ರಾರಂಭವಾಗುತ್ತದೆ. ನಂತರ ಅದನ್ನು 21 ದಿನಗಳ ಕಾಲ ಚಪ್ಪರದೊಳಗೆ (ಚಪ್ಪು ಪಂದಲ್) ನೇತುಹಾಕಿ ಒಣಗಿಸಬೇಕು. ಇತರ ರಾಜ್ಯಗಳಿಗೆ ಹೋಲಿಸಿದರೆ ಕಾಸರಗೋಡಿನ ತಂಬಾಕಿಗೆ ಭಾರಿ ಬೇಡಿಕೆ ಇದೆ.ಮುಖ್ಯವಾಗಿ ‘ಕುಣಿಯ’ ತಂಬಾಕು ಎಂಬ ಪ್ರತ್ಯೇಕ ಪ್ರಭೇದ ಅತೀ ಬೇಡಿಕೆಯ ತಂಬಾಕಾಗಿದ್ದು ಕಾಞಂಗಾಡ್ ಚೆರ್ಕಳ ಮಧ್ಯೆ ಇರುವ ಕುಣಿಯ ಎಂಬ ಪುಟ್ಟ ಗ್ರಾಮದ ಹೆಸರೇ ಇದಕ್ಕಿದೆ. ಗಾತ್ರದಲ್ಲಿ ಸಣ್ಣದಾದ ಈ ಹೊಗೆಸೊಪ್ಪು ಅತೀಹೆಚ್ಚು ಅಮಲುಯುಕ್ತ, ಖಾರದಿಂದ ಕೂಡಿದ್ದು ಭಾರೀ ಬೇಡಿಕೆ ಇದೆ. ಒಣಗಿದ ತಂಬಾಕಿಗೆ ಮಾರುಕಟ್ಟೆಯಲ್ಲಿ 2000 ದಿಂದ 2300 ರೂ.ವರೆಗೆ ಬೆಲೆ ಇದೆ. ಕಾಸರಗೋಡು ತಂಬಾಕನ್ನು ಮುಖ್ಯವಾಗಿ ಕವಳ ಹಾಕುವವರು, ಬೀಡಿ ಮತ್ತು ನಶ್ಯಗಳಿಗೆ ವಿವಿಧ ಹೊಗೆಸೊಪ್ಪು ಉತ್ಪನ್ನಗಳ ತಯಾರಿಸಲು ಬಳಸಲಾಗುತ್ತದೆ.



                     ಅಭಿಮತ:
    ಪ್ರಸ್ತುತ ಬದಲಾದ ಹವಾಮಾನದಿಂದ ತಂಬಾಕು ಬೆಳೆಯ ಮೇಲೆ ಪ್ರತಿಕೂಲ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಬೆಳೆ ನಡೆಸಲು ವಿಶೇಷ ನಿಯಮಗಳ ಕಾನೂನು ಕಟ್ಟಳೆಗಳೂ ಇಂದಿದೆ. ವೆಚ್ಚಗಳು ಹೆಚ್ಚಿದ್ದು ತತ್ಪರಿಣಾಮ ಮಾರುಕಟ್ಟೆಗೆ ದಾಟಿಸುವ ವೇಳೆ ಪ್ರಯಾಸಪಡಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಕಾಸರಗೋಡಿನ ತಂಬಾಕು ಕೃಷಿ ಅವನತಿಯತ್ತ ಸಾಗುತ್ತಿದ್ದು, ಹಿನ್ನಡೆಗೆ ಕಾರಣವಾಗಿದೆ.
                      -ಕೆ.ಇಬ್ರಾಹಿಂ
                    ಕುಣಿಯದ ಹಿರಿಯ ತಂಬಾಕು ಕೃಷಿಕ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries