ನವದೆಹಲಿ:
'ಸರ್ಕಾರದ ನೀತಿಗಳ ವಿರುದ್ಧ ಸುದ್ದಿವಾಹಿನಿ ಮಾಡಿರುವ ಕಟು ವಿಮರ್ಶೆಯನ್ನು ಆಡಳಿತ
ವಿರೋಧಿ ಎಂದು ಕರೆಯಲಾಗದು. ಸದೃಢ ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ಮಾಧ್ಯಮ ಅಗತ್ಯ'
ಎಂದು ಸುಪ್ರೀಂ ಕೋರ್ಟ್
ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡಿದ ಆರೋಪದಡಿ ಕೇಂದ್ರ ಸರ್ಕಾರ ಕೇರಳದ 'ಮೀಡಿಯಾ ಒನ್' ಮಲಯಾಳ ಸುದ್ದಿವಾಹಿನಿಯ ಪ್ರಸಾರದ ಮೇಲೆ ನಿರ್ಬಂಧ ಹೇರಿತ್ತು. ಇದನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುದ್ದಿವಾಹಿನಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ನ್ಯಾಯಪೀಠವು ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದೆ.
'ರಾಷ್ಟ್ರೀಯ →ಭದ್ರತೆಗೆ ಧಕ್ಕೆ ಉಂಟುಮಾಡಿದ್ದಾಗಿ ಸುಮ್ಮನೇ ಆರೋಪಿಸುವಂತಿಲ್ಲ. ಅದನ್ನು ಸಾಬೀತುಪಡಿಸುವುದಕ್ಕೆ ಅಗತ್ಯ ಸಾಕ್ಷ್ಯಾಧಾರಗಳು ಇರಲೇಬೇಕಾಗುತ್ತದೆ' ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಗೃಹ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.
'ನಾಗರಿಕರನ್ನು ಜಾಗೃತರನ್ನಾಗಿಸುವ ಸಲುವಾಗಿ, ಪ್ರಜಾಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಇರುವ ಆಯ್ಕೆಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಅವರಿಗೆ ಸತ್ಯ ಹೇಳಬೇಕಿರುವುದು ಮಾಧ್ಯಮದ ಕರ್ತವ್ಯ. ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧವು ನಾಗರಿಕರನ್ನೂ ಅದೇ ನೆಲೆಯಲ್ಲಿ ಯೋಚಿಸುವಂತೆ ಮಾಡುತ್ತದೆ' ಎಂದು ನ್ಯಾಯಪೀಠ ತಿಳಿಸಿದೆ.