ಗ್ಯಾಂಗ್ಟಕ್: ಪೂರ್ವ ಸಿಕ್ಕಿಂನ ನಾಥೂ ಲಾ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಉಂಟಾಗಿದ್ದ ಭಾರಿ ಹಿಮಪಾತದಲ್ಲಿ ಸಿಲುಕಿದ್ದವರ ಪೈಕಿ ಕೆಲವರು ನಾಪತ್ತೆಯಾಗಿರುವ ಸಾಧ್ಯತೆ ಇರುವುದರಿಂದ ಸೇನೆ ಹಾಗೂ ಗಡಿ ಮಾರ್ಗ ಪಡೆಯ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ.
'ಪ್ರವಾಸಿಗರ ಪೈಕಿ ಯಾರಾದರೂ ಹಿಮದಡಿ ಸಿಲುಕಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚುವುದಕ್ಕಾಗಿ 15ನೇ ಮೈಲಿಗಲ್ಲಿನ ಬಳಿ ಬೆಳಿಗ್ಗೆ 8 ಗಂಟೆಯಿಂದಲೇ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ' ಎಂದು ಪೂರ್ವ ಸಿಕ್ಕಿಂನ ಜಿಲ್ಲಾಧಿಕಾರಿ ತುಷಾರ್ ನಿಖಾನೆ ತಿಳಿಸಿದ್ದಾರೆ.
'ಘಟನೆಯಲ್ಲಿ ಗಾಯಗೊಂಡಿದ್ದ 13 ಮಂದಿಯನ್ನು ಎಸ್‌ಟಿಎನ್‌ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಒಂಬತ್ತು ಮಂದಿಗೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ' ಎಂದಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯ ಸೌರಭ್ ರಾಯ್ ಚೌಧರಿ ಎಂಬುವರು ದುರಂತದಲ್ಲಿ ಮೃತಪಟ್ಟಿದ್ದಾರೆ. 'ಮರಣೋತ್ತರ ಪರೀಕ್ಷೆಯ ಬಳಿಕ ಸೌರಭ್ ಮೃತದೇಹವನ್ನು ನಗರಕ್ಕೆ ತರಲಾಗುತ್ತದೆ' ಎಂದು ಸಿಲಿಗುರಿಯ ಮೇಯರ್ ಗೌತಮ್ ದೇವ್ ಹೇಳಿದ್ದಾರೆ.
28 ವರ್ಷದ ಸೌರಭ್ ಅವರು ಮೂವರು ಸ್ನೇಹಿತರೊಂದಿಗೆ ನಾಥೂ ಲಾ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದರು.