ನವದೆಹಲಿ:ಪಾಶ್ಚಿಮಾತ್ಯ ಪ್ರಕ್ಷುಬ್ಧತೆಯಿಂದಾಗಿ ಉಷ್ಣಮಾರುತದಿಂದ ಕಂಗೆಟ್ಟಿದ್ದ ಬಿಹಾರ, ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಉಷ್ಣಾಂಶದ ತೀವ್ರತೆ ಇಳಿಮುಖವಾಗಿದ್ದು, ಜನ ಸ್ವಲ್ಪಮಟ್ಟಿಗೆ ನಿರಾಳರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿರುಗಾಳಿ ಪ್ರಸರಣ ನಿರೀಕ್ಷೆಯಿದೆ ಎಂದು ಭಾರತದ ಹವಾಮಾನ ಇಲಾಖೆ ಅಂದಾಜಿಸಿದೆ.
ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಪಾಶ್ಚಿಮಾತ್ಯ ಪ್ರಕ್ಷುಬ್ಧತೆಯಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಉತ್ತರ ಪ್ರದೇಶದಲ್ಲಿ ಬಿರುಗಾಳಿ ಪ್ರಸರಣದ ಸಾಧ್ಯತೆ ಇದೆ. ಬಂಗಾಳಕೊಲ್ಲಿಯ ವಾಯವ್ಯದಲ್ಲಿ ಬಿರುಗಾಳಿ ಪ್ರಸರಣ ತಡೆ ಅಂಶದಿಂದಾಗಿ ತೇವಾಂಶ ಹೆಚ್ಚಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಗಂಗಾನದಿ ತೀರದ ಪಶ್ಚಿಮ ಬಂಗಾಳದಲ್ಲಿ ಕಳೆದ 10 ದಿನಗಳಿಂದ ಉಷ್ಣಮಾರುತದ ಸ್ಥಿತಿ ಇತ್ತು. ಬಿಹಾರ ಹಾಗೂ ಒಡಿಶಾದಲ್ಲಿ ಕೂಡಾ ಏಳು ದಿನಗಳಿಂದ ಇದೇ ವಾತಾವರಣ ಇತ್ತು. ಕೆಲ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 44-45 ಡಿಗ್ರಿ ಸೆಲ್ಷಿಯಸ್ ತಲುಪಿತ್ತು. ತೀವ್ರ ಬಿಸಿಗಾಳಿಯ ಕಾರಣದಿಂದ ಗಂಗಾನದಿ ತೀರದ ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಸಾರ್ವಜನಿಕ ಜನಜೀವನ ಅಸ್ತವ್ಯಸ್ತವಾಗಿತ್ತು.
ಆದರೆ ಮುಂದಿನ ಐದು ದಿನಗಳ ಅವಧಿಯಲ್ಲಿ ಪೂರ್ವ ಭಾರತದಲ್ಲಿ ಉಷ್ಣಾಂಶ ಸುಮಾರು ಮೂರರಿಂದ ಐದು ಡಿಗ್ರಿಯಷ್ಟು ಇಳಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ವಾಯವ್ಯ ಹಾಗೂ ಪಶ್ಚಿಮ ಭಾರತದ ಹವಾಮಾನದಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಯಾವುದೇ ದೊಡ್ಡ ಬದಲಾವಣೆ ನಿರೀಕ್ಷೆ ಇಲ್ಲ ಎಂದು ಹೇಳಿದೆ.
ದೇಶದ ಬಹುತೇಕ ಎಲ್ಲ ಕಡೆಗಳಲ್ಲಿ ಎಪ್ರಿಲ್‍ನಿಂದ ಜೂನ್ ವರೆಗೆ ತಾಪಮಾನ ಸರಾಸರಿಗಿಂತ ಅಧಿಕ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕೇಂದ್ರ, ಪೂರ್ವ ಮತ್ತು ವಾಯವ್ಯ ಭಾರತದಲ್ಲಿ ಈ ಅವಧಿಯಲ್ಲಿ ಸಾಮಾನ್ಯಕ್ಕಿಂತ ತೀವ್ರ ಬಿಸಿಗಾಳಿ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.