ವಯನಾಡು: 'ಸಂಸದ ಸ್ಥಾನದಿಂದ ಅನರ್ಹಗೊಳಿಸುವುದು ಅಥವಾ ಅಧಿಕೃತ ನಿವಾಸ ಖಾಲಿ ಮಾಡಿಸುವುದೂ ಸೇರಿದಂತೆ ಬಿಜೆಪಿ ಎಂತಹುದೇ ತಂತ್ರಗಳನ್ನಾದರೂ ಅನುಸರಿಸಲಿ. ನಾನಂತೂ ಹೆದರುವುದಿಲ್ಲ. ಬಿಜೆಪಿಯವರು ಟೀಕೆ ಮಾಡಿದಾಗಲೆಲ್ಲಾ ನಾನು ಸರಿ ದಾರಿಯಲ್ಲಿ ಸಾಗುತ್ತಿರುವುದರ ಅರಿವಾಗುತ್ತದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಇದೇ ಮೊದಲ ಬಾರಿಗೆ ವಯನಾಡು ಲೋಕಸಭಾ ಕ್ಷೇತ್ರದ ಕಾಲ್‌ಪೆಟ್ಟಾ ಪ್ರದೇಶಕ್ಕೆ ಭೇಟಿ ನೀಡಿದ್ದ ಅವರಿಗೆ ಕ್ಷೇತ್ರದ ಜನರು ಹಾಗೂ ಬೆಂಬಲಿಗರಿಂದ ಅದ್ದೂರಿ ಸ್ವಾಗತ ದೊರೆಯಿತು. 'ಸತ್ಯಮೇಯ ಜಯತೆ' ಹೆಸರಿನಡಿ ಮಂಗಳವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಯಾತ್ರೆಗೆ ಭಾರಿ ಬೆಂಬಲ ವ್ಯಕ್ತವಾಯಿತು. ರಾಹುಲ್ ಹಾಗೂ ಅವರ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆ ಸಾಗಿದ ಮಾರ್ಗದ ಇಕ್ಕೆಲಗಳಲ್ಲೂ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.
'ಸಂಸದ ಸ್ಥಾನವೆಂಬುದು ಒಂದು ಹಣೆಪಟ್ಟಿ. ಅದೊಂದು ಹುದ್ದೆ ಮಾತ್ರ. ಬಿಜೆಪಿಯು ನನ್ನಿಂದ ಈ ಹಣೆಪಟ್ಟಿ ಅಥವಾ ಹುದ್ದೆ ಕಿತ್ತುಕೊಳ್ಳಬಹುದು. ನನಗೆ ಹಂಚಿಕೆ ಮಾಡಿದ್ದ ಮನೆಯನ್ನೂ ಹಿಂದಕ್ಕೆ ಪಡೆಯಬಹುದು. ಹೆಚ್ಚೆಂದರೆ ಜೈಲಿಗೆ ಕಳುಹಿಸಬಹುದು. ಆದರೆ ವಯನಾಡಿನ ಜನರನ್ನು ಪ್ರತಿನಿಧಿಸುವುದನ್ನು ತಡೆಯುವುದಕ್ಕೆ ಅವರಿಂದ ಸಾಧ್ಯವೇ ಇಲ್ಲ' ಎಂದು ಹೇಳಿದ್ದಾರೆ.
'ಪೊಲೀಸರನ್ನು ಮನೆಗೆ ಕಳಿಸಿದಾಕ್ಷಣ ಹೆದರಿಬಿಡುತ್ತೇನೆ. ಅಧಿಕೃತ ನಿವಾಸದಿಂದ ಹೊರಹಾಕಿದರೆ ವಿಚಲಿತನಾಗಿಬಿಡುತ್ತೇನೆ ಎಂದು ಅವರು ಭಾವಿಸಿರಬಹುದು. ವಯನಾಡು ಹಾಗೂ ದೇಶದ ಸಮಸ್ಯೆಗಳ ಕುರಿತು ಪ್ರಶ್ನೆ ಕೇಳದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯವರು ನನ್ನಿಂದ ಮನೆ ಹಿಂಪಡೆದಿರುವುದು ಖುಷಿ ನೀಡಿದೆ. ಆ ಮನೆಯಲ್ಲಿ ಇರುವುದಕ್ಕೆ ನನಗೆ ಆಸಕ್ತಿಯೇ ಇರಲಿಲ್ಲ' ಎಂದಿದ್ದಾರೆ.
'ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಬಿಜೆಪಿಯವರು ನನಗೆ ನೀಡಿರುವ ಬಹುದೊಡ್ಡ ಕೊಡುಗೆ. ಸಂಸದ ಸ್ಥಾನದಿಂದ ಅನರ್ಹಗೊಂಡರೂ ವಯನಾಡಿನಲ್ಲಿ ಅಭಿವೃದ್ಧಿ ಕೆಲಸಗಳು ನಿಲ್ಲುವುದಿಲ್ಲ. ಇಲ್ಲಿನ ಜನರ ಜೊತೆಗಿನ ಒಡನಾಟ ಹೀಗೆ ಇರಲಿದೆ' ಎಂದಿದ್ದಾರೆ.