ಟೆಕ್ಸಾಸ್: ಜಾಗತಿಕ ಉದ್ಯಮಿ ಎಲಾನ್ ಮಸ್ಕ್ ಅವರ ಒಡೆತನದ ಸ್ಪೇಸ್ ಎಕ್ಸ್ ನಿರ್ಮಾಣ ಮಾಡಿರುವ ಜಗತ್ತಿನ ಅತಿ ದೊಡ್ಡ ರಾಕೆಟ್ ಸ್ಟಾರ್ ಶಿಪ್ ರಾಕೆಟ್ ಉಡಾವಣೆಗೊಂಡ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿದೆ.
ಟೆಕ್ಸಾಸ್‌ನ ಬೋಕಾ ಚಿಕಾದಲ್ಲಿರುವ ಸ್ಟಾರ್‌ಬೆಸ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಸ್ಟಾರ್ ಶಿಪ್ ರಾಕೆಟ್ ಅನ್ನು ಪ್ರಾಯೋಗಿಕವಾಗಿ ಟೆಕ್ಸಾಸ್ ಕಾಲಮಾನ ಪ್ರಕಾರ ಗುರುವಾರ ಬೆಳಿಗ್ಗೆ 8.33ಕ್ಕೆ ಉಡಾವಣೆ ಮಾಡಲಾಯಿತು.
ಆದರೆ ವೇಗವಾಗಿ ಆಕಾಶದತ್ತ ಚಿಮ್ಮಿದ ಸ್ಟಾರ್ ಶಿಪ್ ರಾಕೆಟ್ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡು ಗಲ್ಫ್ ಆಫ್ ಮೆಕ್ಸಿಕೋಗೆ ಬಂದಪ್ಪಳಿಸಿದೆ.
ಸ್ಟಾರ್ ಶಿಪ್ ರಾಕೆಟ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಚಿಮ್ಮಿದ ನಂತರ ಸ್ಫೋಟಗೊಳ್ಳುವ ಮೊದಲು ಆಗಸದಲ್ಲಿ ಅಲುಗಾಡಲು ಮತ್ತು ತಿರುಗಲು ಪ್ರಾರಂಭಿಸಿದೆ. ಬಳಿಕ ಏಕಾಏಕಿ ಸ್ಫೋಟಗೊಂಡಿದೆ.
ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ ಉದ್ದೇಶದಿಂದ ಸ್ಟಾರ್‌ಶಿಪ್ ರಾಕೆಟ್‌ಅನ್ನು ಅಭಿವೃದ್ಧಿಪಡಿಸಲಾಗಿತ್ತು.
ರಾಕೆಟ್ ವ್ಯವಸ್ಥೆಯ ಎರಡು ವಿಭಾಗಗಳಾದ ಬೂಸ್ಟರ್ ಮತ್ತು ಕ್ರೂಸ್ ನೌಕೆ ಉಡ್ಡಯನದ ನಂತರ ಸರಿಯಾಗಿ ಬೇರ್ಪಡಲು ಸಾಧ್ಯವಾಗದಿರುವುದು ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ರಾಕೆಟ್ ಬೇರ್ಪಟ್ಟಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಸ್ಪೇಸ್ ಎಕ್ಸ್ ಟ್ವೀಟ್ ಮಾಡಿದೆ.
ಸ್ಟಾರ್‌ಶಿಪ್ ರಾಕೆಟ್ ಸ್ಫೋಟಗೊಂಡು ಛಿದ್ರಛಿದ್ರವಾಗಿ ಹೊಗೆಯಾಗುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್‌ನಲ್ಲಿ ಈ ವಿಚಾರ ಟ್ರೆಂಡಿಂಗ್‌ನಲ್ಲಿ ಚರ್ಚೆಯಾಗುತ್ತಿದೆ.