ತ್ರಿಶೂರ್: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿನ ಶಂಕಿತ ವಿಷಾಹಾರ ಸೇವನೆ ಪ್ರಕರಣವೀಗ ಹತ್ಯೆ ಪ್ರಕರಣವಾಗಿ ಬದಲಾಗಿದೆ. ಅವನೂರು ನಿವಾಸಿ ಶಶೀಂದ್ರನ್ (57) ಎಂಬವರು ಎಪ್ರಿಲ್ 2, ರವಿವಾರದಂದು ವಿಷಾಹಾರ ಸೇವನೆ ಲಕ್ಷಣಗಳು ಕಾಣಿಸಿಕೊಂಡ ನಂತರ ಮೃತಪಟ್ಟಿದ್ದರು.
ಅವರಲ್ಲದೆ, ಶಶೀಂದ್ರನ್ ಅವರ ಪತ್ನಿ ಹಾಗೂ ಅವರ 92 ವರ್ಷದ ತಾಯಿ ಸೇರಿದಂತೆ ಇತರ ನಾಲ್ಕು ಮಂದಿಯನ್ನೂ ಕೂಡಾ ಇದೇ ಕಾರಣಕ್ಕೆ ತ್ರಿಶೂರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ನಾನು ನನ್ನ ತಂದೆಯನ್ನು ಇಷ್ಟಪಡದೆ ಇದ್ದುದರಿಂದ ಅವರನ್ನು ಕೊಲ್ಲಲು ಆಹಾರದಲ್ಲಿ ವಿಷ ಬೆರೆಸಿದ್ದೆ ಎಂದು ಶಶೀಂದ್ರನ್ ಅವರ ಪುತ್ರ ಮಯೂರ್‌ನಾಥನ್ ಘಟನೆಯ ನಂತರ ತಪ್ಪೊಪ್ಪಿಕೊಂಡಿದ್ದಾನೆ ಎಂದು thenewsminute.com ವರದಿ ಮಾಡಿದೆ.
ರವಿವಾರ ರಾತ್ರಿ ಶಶೀಂದ್ರನ್ ಸಣ್ಣ ವಿಹಾರ ಮಾಡಲು ಮನೆಯಿಂದ ಹೊರ ನಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಹೊಂದಿಕೊಂಡಿರುವ ಎಟಿಎಂಗೆ ತಲುಪಿದ ಕೂಡಲೇ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದರು.
ರವಿವಾರ ಉಪಾಹಾರ ಸೇವಿಸಿದ ನಂತರ ಶಶೀಂದ್ರನ್ ಸೇರಿದಂತೆ ಐವರು ಅಸ್ವಸ್ಥರಾಗಿದ್ದರು. ಈ ಕುರಿತು The News Minute ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ತ್ರಿಶೂರ್ ವೈದ್ಯಕೀಯ ಕಾಲೇಜಿನ ಪೊಲೀಸರು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ವಿಷಪ್ರಾಶನ ಸಾಧ್ಯತೆ ಬಗ್ಗೆ ಶಂಕಿಸಲಾಯಿತು. ಈ ಕುರಿತು ಮಯೂರ್‌ನಾಥನ್‌ನನ್ನು ವಿಚಾರಣೆಗೊಳಪಡಿಸಿದಾಗ ಆತ ತನ್ನ ಅಪರಾಧವನ್ನು ಒಪ್ಪಿಕೊಂಡ ಎಂದು ತಿಳಿಸಿದ್ದಾರೆ.
ತನ್ನ ತಂದೆ ಹಾಗೂ ಇತರರೊಂದಿಗೆ ಉಪಾಹಾರ ಸೇವಿಸಿದ್ದ ಮಯೂರ್‌ನಾಥನ್ ಮಾತ್ರ ಅಸ್ವಸ್ಥಗೊಳ್ಳದೆ ಇದ್ದುದರಿಂದ ಘಟನೆಯಲ್ಲಿ ಮಯೂರ್‌ನಾಥನ್ ಕೈವಾಡದ ಬಗ್ಗೆ ಪೊಲೀಸರಿಗೆ ಸಂಶಯ ಉಂಟಾಯಿತು. "ಆತ ತನ್ನ ತಂದೆಯನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ. ಆದರೆ, ಉಪಾಹಾರವನ್ನು ಇತರ ನಾಲ್ಕು ಮಂದಿಯೂ ಸೇವಿಸಿದ್ದರು. ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.