ಹೈದರಾಬಾದ್: ಏರುತ್ತಿರುವ ತಾಪಮಾನವನ್ನು ಕಡಿಮೆ ಮಾಡಲು ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ತಾಪಮಾನವನ್ನು ಕಡಿಮೆ ಮಾಡುವ ಉದ್ದೇಶದಿಂದ ತೆಲಂಗಾಣ ಸರ್ಕಾರವು 'ಕೂಲ್ ರೂಫ್' ನೀತಿಯನ್ನು ಅಳವಡಿಸಿಕೊಂಡಿದೆ.
ಈ ರೀತಿಯ ನೀತಿಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ತೆಲಂಗಾಣವಾಗಿದೆ.
ತೆಲಂಗಾಣ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್ ಅವರು ಸೋಮವಾರ 'ತೆಲಂಗಾಣ ಕೂಲ್ ರೂಫ್ ನೀತಿ 2023-2028'ಕ್ಕೆ ಚಾಲನೆ ನೀಡಿದ್ದಾರೆ.
ಬಿಲ್ಡರ್‌ಗಳು ಮತ್ತು ಕಟ್ಟಡಗಳನ್ನು ನಿರ್ಮಿಸುವವರು ಸೂರ್ಯನ ಬೆಳಕನ್ನು ಪ್ರತಿಫಲಿಸುವ ಬಣ್ಣಗಳು, ಟೈಲ್ಸ್ ಅಥವಾ ಇತರ ವಸ್ತುಗಳನ್ನು ಬಳಸಿ ಅಳವಡಿಸಬಹುದಾದ ತಂಪಾದ ಚಾವಣಿಯನ್ನು ರೂಪಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.
'ಕೂಲ್ ರೂಫ್' ನೀತಿಯು ಕಟ್ಟಡದ ಮೇಲ್ಚಾವಣಿಯನ್ನು ತಂಪಾಗಿಸುವ ಉದ್ದೇಶವನ್ನು ಹೊಂದಿದ್ದು ಸೂರ್ಯನಿಂದ ಬರುವ ವಿಕಿರಣಗಳನ್ನು ವಾತಾವರಣಕ್ಕೆ ಹಿಂತಿರುಗಿಸುತ್ತದೆ. ಹೀಗಾಗಿ ಕಟ್ಟಡದ ಶಾಖದ ಧಾರಣೆಯು ಕಡಿಮೆಯಾಗಿ ಒಳಾಂಗಣದ ಸ್ಥಳಗಳನ್ನು ತಂಪಾಗಿಡುತ್ತದೆ.
ಆರಂಭದ ಹಂತಗಳಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ವಸತಿ ಯೋಜನೆಗಳು, ಸರ್ಕಾರಿ ಕಚೇರಿಗಳಲ್ಲಿ ತಂಪಾದ ಚಾವಣಿಗಳನ್ನು ಅಳವಡಿಸಲು ಯೋಜಿಸಿದೆ.