ಮುಳ್ಳೇರಿಯ: ಉತ್ತರ ಕೇರಳದ ಪ್ರಮುಖ ಹಬ್ಬವಾದ ಪೂರಂ ಉತ್ಸವಾಚರಣೆ ಅಲ್ಲಲ್ಲಿ ಆರಂಭಗೊಳ್ಳುತ್ತಿರುವಂತೆ ಬೆತ್ತದ ಬುಟ್ಟಿಗಳಿಗೆ ಬಹುಬೇಡಿಕೆ. ಸಾಂಪ್ರದಾಯಿಕವಾಗಿ ಸಾಮೂಹಿಕ ಬುಟ್ಟಿ ಹೆಣೆಯುವಿಕೆಗೆ ತೊಡಗಿಸಿಕೊಂಡಿರುವ ಜನರು ಪ್ರಸ್ತುತ ಬೆತ್ತಗಳ ಲಭ್ಯತೆಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಪ್ರಧಾನ ಪೂರಂ ಉತ್ಸವಗಳು ನಡೆಯುವ ಪ್ರದೇಶವಾದ ಮಡಿಕೈ ಬಂಗಳಂ ಅಂಕಕಲರಿಯಲ್ಲಿ ಸುಮಾರು ಆರು ಕುಟುಂಬಗಳಷ್ಟೇ ಈಗ ಬುಟ್ಟಿ ಹೆಣೆಯುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ.
ಈ ಕೌಶಲವು ಈ ಕುಟುಂಬಗಳಲ್ಲಿ ತಲೆಮಾರುಗಳ ಮೂಲಕ ಹಾದುಹೋಗುವ ಕರಕುಶಲವಾಗಿದೆ. ಬೆತ್ತಗಳ ಆಯುವಿಕೆಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವುದು ಈ ಕ್ಷೇತ್ರದ ಮೇಲೆ ಕರಾಳ ಛಾಯೆ ಮೂಡಿಸಿದೆ. ಇದರಿಂದ ಅನೇಕರು ಕೆಲಸ ಬಿಟ್ಟು ಹೋಗುತ್ತಿದ್ದಾರೆ ಎನ್ನುತ್ತಾರೆ ಅಂಕಕಲರಿ ನಿವಾಸಿ 80ರ ಹರೆಯದ ಪಿ.ವಿ.ನಾರಾಯಣನ್.
ಬಂಗಳಂ, ಮಡಿಕೈ ಪ್ರದೇಶಗಳ ಮಾವಿಲನ್ ಮತ್ತು ಮುವಾರಿ ಸಮುದಾಯಗಳು ವಿವಿಧ ರೀತಿಯ ಬುಟ್ಟಿ ಹೆಣೆಯುವಿಕೆಯಲ್ಲಿ ನಿಸ್ಸೀಮರು. ಇತರ ಪ್ರದೇಶಗಳಲ್ಲಿ ಆಧುನಿಕತೆ ಪ್ರವೇಶಿಸಿ ಸಾಂಪ್ರದಾಯಿಕತೆ ಮರೆಯಾಗಿ ಪ್ಲಾಸ್ಟಿಕ್ ಹಾಗೂ ರಬ್ಬರ್ ವಸ್ತುಗಳ ಬಳಕೆ ಹೆಚ್ಚಳಗೊಂಡಿದ್ದರೂ, ಮಲಬಾರ್ ಮತ್ತು ದಕ್ಷಿಣ ಕೇರಳದಲ್ಲಿ ಬನ, ದೇವಾಲಯಗಳೇ ಮೊದಲಾದ ಆರಾಧನಾಲಯಗಳಲ್ಲಿ ಸಾಂಪ್ರದಾಯಿಕ ವಸ್ತುಗಳನ್ನೇ ಈಗಲೂ ಬಳಸುವುದು ವಿಶೇಷ. ಪರ ಬುಟ್ಟಿ, ಕುಟ್ಟಿ ಬುಟ್ಟಿ, ಅರಿಪ್ಪೆ ಬುಟ್ಟಿ, ಕುರಿಯ ಬುಟ್ಟಿ ಮತ್ತು ಹೂವಿನ ಬುಟ್ಟಿ ಪ್ರಮುಖ ಬುಟ್ಟಿ ನಿರ್ಮಿತಿಯ ವಿಭಾಗಗಳಾಗಿವೆ. ಪೂರಂ ಋತುವಲ್ಲಿ ಹೂವಿನ ಬುಟ್ಟಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಸಗಟು ವ್ಯಾಪಾರಿಗಳಿಂದ 250 ರೂ.ವರೆಗೆ ಖರೀದಿಸಲಾಗುತ್ತದೆ. ಹಿಂದೆಲ್ಲ ವಾರಗಳಲ್ಲಿ ಒಬ್ಬ ವ್ಯಕ್ತಿ 200 ಬುಟ್ಟಿಗಳನ್ನು ತಯಾರಿಸುತ್ತಿದ್ದರಂತೆ.
ಪ್ರಸ್ತುತ ಬಿಕ್ಕಟ್ಟಿನಿಂದಾಗಿ 50 ಬುಟ್ಟಿಗಳನ್ನೂ ತಯಾರಿಸಲು ಸಾಧ್ಯವಾಗುತ್ತಿಲ್ಲ. ಲಾಕ್‍ಡೌನ್‍ನ ಸಾಂಕ್ರಾಮಿಕ ಅವಧಿಯ ನಂತರ ಹಬ್ಬದ ಋತು ಮತ್ತೆ ಪ್ರಾರಂಭವಾಗುತ್ತಿದ್ದಂತೆ ನಿರೀಕ್ಷೆಗಳು ಹೆಚ್ಚಾಗಿವೆ. ಅಂಕಕಲಾರಿ ಪ್ರದೇಶದಲ್ಲಿ ಸುಮಾರು ಮೂವತ್ತು ಕುಟುಂಬಗಳು ಈ ವೃತ್ತಿಯನ್ನು ಮಾಡುತ್ತಿದ್ದು, ಈಗ ಈ ವೃತ್ತಿಯು ಸುಮಾರು ಆರು ಕುಟುಂಬಗಳಿಗೆ ಸೀಮಿತವಾಗಿದೆ.
ಪೂರಂ ಉತ್ಸವದ ಬೆನ್ನೆಗೇ ಸಾಂಪ್ರದಾಯಿಕ ಬುಟ್ಟಿಗೆ ಹೆಚ್ಚಿದ ಬೇಡಿಕೆ: ತೀವ್ರ ಕೊರತೆಯಲ್ಲಿ ಬೆತ್ತಗಳ ಲಭ್ಯತೆ
0
ಏಪ್ರಿಲ್ 04, 2023