ಜೈಪುರ್: ನಗರದ ಝಲಾನ ಚಿರತೆ ಸಂರಕ್ಷಿತ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯಂತೆ ಉಡುಪು ಧರಿಸಿ ನೀಲ್‌ಗಾಯ್ ಒಂದಕ್ಕೆ ತಾನು ಆಹಾರ ನೀಡುತ್ತಿರುವ ವೀಡಿಯೋ ಒಂದನ್ನು ಕಾಮಿಡಿಯನ್ ಮತ್ತು ಮಿಮಿಕ್ರಿ ಕಲಾವಿದ ಶ್ಯಾಮ್ ರಂಗೀಲಾ (Comedian Shyam Rangeela) ಅವರು ಪೋಸ್ಟ್ ಮಾಡಿ ಅದು ವೈರಲ್ ಆದ ಬೆನ್ನಿಗೇ ಅವರಿಗೆ ಜೈಪುರ ಪ್ರಾದೇಶಿಕ ಅರಣ್ಯ ಅಧಿಕಾರಿ ಸಮನ್ಸ್ ಕಳುಹಿಸಿ ತಮ್ಮೆದುರು ಹಾಜರಾಗುವಂತೆ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಇತೀಚಿಗಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ವೇಳೆ ಧರಿಸಿದ ಉಡುಪಿನಂತೆಯೇ ಉಡುಪು ಧರಿಸಿ ಈ ವೀಡಿಯೋದಲ್ಲಿ ಶ್ಯಾಮ್ ಕಾಣಿಸಿಕೊಂಡಿದ್ದರು.
ಆದರೆ ಜೈಪುರ್‌ನ ಝಲಾನದಲ್ಲಿ ಜಂಗಲ್ ಸಫಾರಿ ವೇಳೆ ನೀಲಗಾಯಿಗೆ ಆಹಾರ ನೀಡಿ ವನ್ಯಜೀವಿ ಸಂರಕ್ಷಣಾ ಕಾಯಿದೆಯ ನಿಯಮ ಉಲ್ಲಂಘಿಸಿದ್ದಕ್ಕಾಗಿ ಶ್ಯಾಮ್‌ಗೆ ನೋಟಿಸ್ ಜಾರಿಗೊಳಿಸಲಾಗಿದೆ.
ವೀಡಿಯೋದಲ್ಲಿ ಶ್ಯಾಮ್ ರಂಗೀಲಾ ಅವರು ಪ್ರಧಾನಿಯ ರೀತಿಯಲ್ಲಿಯೇ ಟೋಪಿ, ಸನ್‌ಗ್ಲಾಸ್ ಮತ್ತು ಅರ್ಧ ತೋಳಿನ ಜಾಕೆಟ್ ಧರಿಸಿದ್ದರು.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಈ ಕುರಿತು ಪ್ರತಿಕ್ರಿಯಿಸಿದ ಜೈಪುರ್ ಪ್ರಾದೇಶಿಕ ಅರಣ್ಯಾಧಿಕಾರಿ ಜನೇಶ್ವರ್ ಚೌಧುರಿ, ಯುಟ್ಯೂಬ್ ಚಾನಲ್‌ನಲ್ಲಿ ಶ್ಯಾಮ್ ರಂಗೀಲಾ ಅವರು ಎಪ್ರಿಲ್ 13 ರಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ ಅದಲ್ಲಿ ಅವರು ಕಾರಿನಿಂದ ಕೆಳಗಿಳಿದು ನಂತರ ತಮ್ಮ ಕೈಯ್ಯಾರೆ ನೀಲಗಾಯಿಗೆ ತಿನಿಸುವುದು ಕಾಣಿಸುತ್ತದೆ ಎಂದು ಹೇಳಿದ ಅವರು ವನ್ಯಪ್ರಾಣಿಗಳಿಗೆ ಜನರು ಆಹಾರ ನೀಡುವುದು ಅರಣ್ಯ ಕಾಯಿದೆ 1953 ಮತ್ತು ವನ್ಯಜೀವಿ ರಕ್ಷಣೆ ಕಾಯಿದೆ 1972 ಇದರ ಉಲ್ಲಂಘನೆಯಾಗಿದೆ ಎಂದರು.
ಹೀಗೆ ಯಾರು ಬೇಕಾದರೂ ವನ್ಯಪ್ರಾಣಿಗಳಿಗೆ ಆಹಾರ ನೀಡಿದರೆ ಗಂಭೀರ ಸೋಂಕು ಮತ್ತು ರೋಗಗಳಿಗೆ ಕಾರಣವಾಗಬಹುದು ಹಾಗೂ ಪ್ರಾಣಕ್ಕೆ ಅಪಾಯವುಂಟಾಗಬಹುದು. ಈ ಕುರಿತು ಅರಣ್ಯ ಪ್ರದೇಶದಲ್ಲಿ ಸೂಚನಾ ಫಲಕಗಳೂ ಇವೆ ಎಂದು ಅವರು ಹೇಳಿದ್ದಾರೆ.
ಶ್ಯಾಮ್ ರಂಗೀಲಾ ಅವರು ಸ್ವತಃ ಅಪರಾಧವೆಸಗಿದ್ದೇ ಅಲ್ಲದೆ ತಮ್ಮ ವೀಡಿಯೋ ಮೂಲಕ ಇತರರಿಗೂ ಹಾಗೆಯೇ ಮಾಡಲು ಪ್ರೇರೇಪಿಸಿದ್ದಾರೆ. ತನಿಖೆ ನಂತರ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.