ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ಜನರಲ್ ಲೀ ಶಾಂಘ್‌ಫು ಗುರುವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಪಶ್ಚಿಮ ಲಡಾಖ್‌ನ ಗಾಲ್ವಾನ್ ಕಣಿವೆ ಬಳಿ ಮೂರು ವರ್ಷದ ಹಿಂದೆ ನಡೆದಿದ್ದ ಸೇನಾ ಸಂಘರ್ಷದ ನಂತರ ಉಭಯ ದೇಶಗಳ ನಡುವಣ ಗಡಿ ಬಿಕ್ಕಟ್ಟು ಉಲ್ಬಣಿಸಿತ್ತು.
ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ನಿಕಟವರ್ತಿ ಎಂದೇ ಗುರುತಿಸಿಕೊಂಡಿರುವ ಲೀ ಅವರು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ವಿದೇಶಾಂಗ ಸಚಿವರ ಪರಿಷತ್ತಿನ ಸಭೆಗಾಗಿ ಭಾರತಕ್ಕೆ ಆಗಮಿಸುತ್ತಿದ್ದು, ರಾಜನಾಥ್ ಅವರನ್ನು ಭೇಟಿಯಾಗುವರು.
ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಉದ್ಭವಿಸಿರುವ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಂಡುಕೊಳ್ಳಬೇಕಾಗಿರುವ ಹೊಸ ಮಾರ್ಗಗಳ ಕುರಿತು ಚರ್ಚಿಸಲು ಉಭಯ ಸಚಿವರಿಗೆ ಈ ಸಭೆಯು ವೇದಿಕೆಯಾಗಿ ಪರಿಣಮಿಸಲಿದೆ.
'ಭಾರತದ ಆಹ್ವಾನದ ಮೇರೆಗೆ ಜನರಲ್ ಲೀ ಅವರು ವಿದೇಶಾಂಗ ಸಚಿವರ ಪರಿಷತ್ತಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ 27 ಮತ್ತು 28ರಂದು ಸಭೆ ನಿಗದಿಯಾಗಿದೆ. ಭಾರತದ ಪ್ರವಾಸದ ವೇಳೆ ಅವರು ಪರಿಷತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ಪ‍್ರತಿನಿಧಿಗಳನ್ನೂ ಭೇಟಿಯಾಗಲಿದ್ದು, ಭದ್ರತೆ, ರಕ್ಷಣಾ ಸಹಕಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ' ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
'ರಾಜನಾಥ್ ಸಿಂಗ್ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಎಸ್‌ಸಿಒ ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ' ಎಂದು ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಹೇಳಿದ್ದಾರೆ.
ಭಾರತ ಸೇರಿದಂತೆ ಎಸ್‌ಸಿಒ ಸದಸ್ಯ ರಾಷ್ಟ್ರಗಳಾದ ಕಜಕಸ್ತಾನ, ಚೀನಾ, ಕಿರ್ಗಿಸ್ತಾನ, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ ಹಾಗೂ ಉಜ್ಬೇಕಿಸ್ತಾನದ ರಕ್ಷಣಾ ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ವೀಕ್ಷಕ ದೇಶಗಳಾಗಿ ಬೆಲಾರಸ್ ಹಾಗೂ ಇರಾನ್‌ನ ಪ್ರತಿನಿಧಿಗಳು ಸಭೆಗೆ ಹಾಜರಾಗಲಿದ್ದಾರೆ. ಪ್ರಾದೇಶಿಕ ಶಾಂತಿ ಮತ್ತು ಭದ್ರತೆ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಶೃಂಗಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಜನರಲ್ ಲೀ ಶಾಂಘ್‌ಫು