ನವದೆಹಲಿ: ಸಲಿಂಗ ಮದುವೆಯನ್ನು ಸಮಾಜ ಒಪ್ಪಿಕೊಳ್ಳುವಂತಾಗಬೇಕು. ಸಮಾಜ ಸ್ವೀಕರಿಸಿದಾಗ ಮಾತ್ರ ಲೈಂಗಿಕ ಅಲ್ಪಸಂಖ್ಯಾತರು (ಎಲ್‌ಜಿಬಿಟಿಕ್ಯೂಐಎ) ಕೂಡ ಇತರರಂತೆ ಗೌರವದಿಂದ ಬಾಳಲು ಸಾಧ್ಯ. ಸಮಾಜವು ಸಲಿಂಗಿಗಳ ಮದುವೆಯನ್ನು ಒಪ್ಪಿಕೊಳ್ಳುವಂತೆ ಮಾಡಲು ಸುಪ್ರೀಂಕೋರ್ಟ್ ತನ್ನ ಸಂಪೂರ್ಣ ಅಧಿಕಾರವನ್ನು ಬಳಸಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರಿರುವ ಸಾಂವಿಧಾನಿಕ ಪೀಠದ ಮುಂದೆ, ಅರ್ಜಿದಾರರೊಬ್ಬರ ಪರ ವಕೀಲ ಮುಕುಲ್ ರೋಹ್ಟಗಿ ಈ ವಿಚಾರ ಮಂಡಿಸಿದರು.
ಸಲಿಂಗ ಮದುವೆಗೆ ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಬುಧವಾರವೂ ಮುಂದುವರಿಯಿತು.
'ಸರ್ಕಾರವೇ ಮುಂದೆ ಬಂದು, ಸಲಿಂಗ ಮದುವೆಗೆ ಮಾನ್ಯತೆ ನೀಡಬೇಕು' ಎಂದು ವಕೀಲ ರೋಹ್ಟಗಿ ಹೇಳಿದರು.
ವಿಧವೆಯರ ಮರುವಿವಾಹ ಕಾಯ್ದೆಯನ್ನು ಪ್ರಸ್ತಾಪಿಸಿದ ಅವರು, 'ಬಹು ಹಿಂದೆ, ವಿಧವೆಯರು ಮರು ಮದುವೆಯಾಗುವುದನ್ನು ಸಮಾಜ ಸ್ವೀಕರಿಸಿತು.ನಂತರದ ದಿನಗಳಲ್ಲಿ ತ್ವರಿತವಾಗಿ ಕಾಯ್ದೆಯನ್ನು ರೂಪಿಸಿ ಜಾರಿಗೆ ತಂದಾಗ ಸಮಾಜದ ಅದನ್ನು ಸ್ವೀಕರಿಸಿತು' ಎಂದರು.
'ಇಂಥ ಕ್ರಮ ಕೈಗೊಳ್ಳುವುದಕ್ಕಾಗಿ ಸುಪ್ರೀಂಕೋರ್ಟ್‌ಗೆ ಸಂವಿಧಾನದ 142ನೇ ವಿಧಿ ಅಡಿ ಸಂಪೂರ್ಣ ಅಧಿಕಾರ ಇದ್ದು, ಉನ್ನತ ನ್ಯಾಯಾಲಯದ ಬಗ್ಗೆ ಜನರು ವಿಶ್ವಾಸವನ್ನೂ ಹೊಂದಿದ್ದಾರೆ. ಹೀಗಾಗಿ, ನಮ್ಮ ಹಕ್ಕು ನಮಗೆ ದೊರೆಯಲಿದೆ ಎಂಬುದನ್ನು ಸುಪ್ರೀಂಕೋರ್ಟ್ ಖಾತರಿಪಡಿಸುತ್ತದೆ ಎಂಬ ವಿಶ್ವಾಸ ಅರ್ಜಿದಾರರದು' ಎಂದು ರೋಹ್ಟಗಿ ಹೇಳಿದರು.
ಕೇಂದ್ರದ ಪರವಾಗಿ ಹೊಸದಾಗಿ ಅರ್ಜಿ ಸಲ್ಲಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಈ ವಿಷಯದಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಕಕ್ಷಿದಾರರನ್ನಾಗಿ ಮಾಡಬೇಕು' ಎಂದು ಕೋರಿದರು.
'ಈ ವಿಷಯ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಎಲ್ಲ ರಾಜ್ಯಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ಏ. 18ರಂದು ಪತ್ರ ಬರೆಯಲಾಗಿದೆ' ಎಂದು ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ರೋಹ್ಟಗಿ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ವಿಶೇಷ ವಿವಾಹ ಕಾಯ್ದೆಯನ್ನು ಪ್ರಶ್ನಿಸಿ ಹೊಸದಾಗಿ ಅರ್ಜಿ ಸಲ್ಲಿಸಿದ್ದನ್ನು ವಿರೋಧಿಸಿದರು. 'ಸಲಿಂಗ ವಿವಾಹ ವಿಷಯವು ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿದೆ ಎಂಬ ಮಾತ್ರಕ್ಕೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡುವುದು ಸರಿಯಲ್ಲ' ಎಂದು ಹೇಳಿದರು.
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ಆಕ್ಷೇಪವನ್ನು ತಳ್ಳಿಹಾಕಿದರು. ವಿಚಾರಣೆ ಮುಂದುವರಿಯಲಿದೆ.