ನವದೆಹಲಿ: ದೇಶದಲ್ಲಿ ಮಾದಕ ವಸ್ತು ಜಾಲವನ್ನು ಕಿತ್ತೊಗೆಯಲು ಈ ವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ 'ನಿರ್ದಾಕ್ಷಿಣ್ಯ ಕ್ರಮ' ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲ ರಾಜ್ಯ ಸರ್ಕಾರಗಳು ಪಕ್ಷ ಭೇದ ಮರೆತು ಕೈಜೋಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕವಸ್ತು ವಿರೋಧಿ ಕಾರ್ಯಪಡೆ ಮುಖ್ಯಸ್ಥರ ಮೊದಲ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, '2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶವನ್ನು ಮಾದಕವಸ್ತು ಮುಕ್ತವಾಗಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗುರಿ ನಿಗದಿಪಡಿಸಿದೆ' ಎಂದು ಹೇಳಿದರು.
'ಡ್ರಗ್ ವ್ಯಾಪಾರಿಗಳೇ ಮುಖ್ಯ ಆರೋಪಿಗಳು, ಬಳಕೆದಾರರೇ ಸಂತ್ರಸ್ತರು. ಮಾದಕವಸ್ತು ವ್ಯವಹಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ' ಎಂದು ತಿಳಿಸಿದರು.