ತಮಿಳುನಾಡು: ತಿರುವಳ್ಳೂರಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಒತ್ತಾಯಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಈ ವಿಡಿಯೋವನ್ನು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಪೊಲೀಸ್ ಅಧಿಕಾರಿಯ ಕಾಳಜಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಪೆನ್ನಲೂರ್‌ಪೆಟ್ಟೈ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪರಮಶಿವಂ ಅವರು ತಿದೀರ್ ನಗರ ಪ್ರದೇಶದ ಬುಡಕಟ್ಟು ಕುಟುಂಬದ ಕಾರ್ಮಿಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೋಲಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ಈ ಭಾಗದಲ್ಲಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಕೂಲಿ ಕೆಲಸಕ್ಕೆ ಸೇರಿಸಲು ಮುಂದಾಗಿರುವ ಬಗ್ಗೆ ವಿಷಯ ತಿಳಿದ ಪರಮಶಿವಂ ಅವರು, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಸಕಲ ರೀತಿಯಲ್ಲಿ ಸಹಾಯ ಮಾಡುವ ಭರವಸೆಯನ್ನೂ ನೀಡಿದ್ದಾರೆ.
ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದರೆ ಅಥವಾ ಊಟಕ್ಕಾಗಿ ಹಣ ಬೇಕಾದರೆ ಪೊಲೀಸ್ ಠಾಣೆಗೆ ಬನ್ನಿ, ನಾನು ಸಹಾಯ ಮಾಡಲು ಸಿದ್ಧ, ಆದರೆ ದಯವಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಿ. ಈಗ, ಅವರಿಗೆ ಐದು ದಿನವೂ ಮೊಟ್ಟೆ ಮತ್ತು ಆಹಾರವನ್ನು ನೀಡಲಾಗುತ್ತದೆ, ನಾನು ಸಿದ್ಧ. ನಿಮಗೆ ಸಹಾಯ ಮಾಡಲು ಯಾರ ಕಾಲಿಗೂ ಬೀಳಲು. ದಯವಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಿ', ಎಂದು ಪರಮಶಿವಂ ಹೇಳಿದರು.
'ಪೊಲೀಸರ ಕೆಲಸ ಅಪರಾಧ ತಡೆಗಟ್ಟುವುದಷ್ಟೇ ಅಲ್ಲ, ಉತ್ತಮ ಸಮಾಜ ರೂಪಿಸುವಲ್ಲಿ ಅವರ ಪಾತ್ರವೂ ಇದೆ. ಬೆನ್ನಲೂರುಪೇಟೆಯ ಎಸ್.ಐ. ಪರಮಶಿವಂ ಅವರು ಮಕ್ಕಳ ಶಿಕ್ಷಣದ ಪರವಾಗಿ ಮಾತನಾಡಿದ್ದಕ್ಕಾಗಿ ಅಭಿನಂದಿಸುತ್ತೇನೆ ಎಂದು ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.