ಲಖನೌ: ಗ್ಯಾಂಗ್ಸ್ಟರ್ ಅತೀಕ್ ಅಹಮದ್ ಮತ್ತು ಆತನ ಸಹೋದರ ಆಶ್ರಫ್ ಅಹಮದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪತ್ರಕರ್ತರ ಸೋಗಿನಲ್ಲಿ ಹತ್ಯೆ
ಪ್ರಯಾಗರಾಜ್ನಲ್ಲಿ ಅತೀಕ್ ಮತ್ತು ಅಶ್ರಫ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ
ಪತ್ರಕರ್ತರ ವೇಷದಲ್ಲಿ ಬಂದಿದ್ದ ಮೂವರು ದಾಳಿಕೋರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ನಿನ್ನೆ (ಏಪ್ರಿಲ್ 16) ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವೈದ್ಯಕೀಯ
ತಪಾಸಣೆಗಾಗಿ ಇಬ್ಬರಿಗೂ ಕೈಕೋಳ ತೊಡಿಸಿ ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ
ವೇಳೆ ಪತ್ರಕರ್ತ ಅವರನ್ನು ಹಿಂಬಾಲಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಪತ್ರಕರ್ತರ ನಡುವೆ ಅವರ ಸೋಗಿನಲ್ಲಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಘಟನೆಯ ಬೆನ್ನಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧಿತರು ಯಾರು
ಎಂಬುದರ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ. ಆದರೆ, ಆರೋಪಿಗಳು ಇಬ್ಬರನ್ನು ಕೊಲೆ ಮಾಡಿದ
ಬಳಿಕ ಜೈ ಶ್ರೀರಾಮ ಎಂದು ಘೋಷಣೆ ಕೂಗಿದ್ದಾರೆಂದು ಹೇಳಲಾಗಿದೆ.
ಕಾಟ್ರಿಡ್ಜ್‌ಗಳು ಪತ್ತೆ
ಘಟನಾ ಸ್ಥಳದಲ್ಲಿ ಹತ್ತು ಖಾಲಿ ಕಾಟ್ರಿಡ್ಜ್‌ಗಳು ಪತ್ತೆಯಾಗಿದ್ದು, ಇದು ಗುಂಡು ಹಾರಿಸಿರುವುದಕ್ಕೆ ಸಾಕ್ಷಿಯಾಗಿದೆ.
ಈ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗ್ಯಾಂಗ್ಸ್ಟರ್ ಕಂ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸೇರಿದಂತೆ ಯುಪಿ ಪೊಲೀಸ್‌ನ ಹಿರಿಯ ಅಧಿಕಾರಿಗಳ ಸಭೆ ಕರೆದರು. ಲಖನೌದಲ್ಲಿರುವ ಸಿಎಂ ಯೋಗಿ ಸರ್ಕಾರಿ ನಿವಾಸದಲ್ಲಿ ಸಭೆ ನಡೆದಿದ್ದು, ಮೂಲಗಳ ಪ್ರಕಾರ ಬಿಗಿ ಪೊಲೀಸ್ ಭದ್ರತೆಯ ನಡುವೆ ಅತೀಕ್ ಮತ್ತು ಅಶ್ರಫ್ ಹತ್ಯೆಗೆ ಮುಖ್ಯಮಂತ್ರಿ ಯೋಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.