ನವದೆಹಲಿ: ಗೋಮೂತ್ರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಇರುವುದರಿಂದ ಅದು ಮಾನವನ ಸೇವನೆಗೆ ಯೋಗ್ಯವಲ್ಲ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹಸುಗಳು ಮತ್ತು ಎತ್ತುಗಳ ಮೂತ್ರದ ಮಾದರಿಗಳ ಬಗ್ಗೆ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್ಐ) ನಡೆಸಿದ ಅಧ್ಯಯನದಿಂದ ಈ ಅಂಶ ದೃಢಪಟ್ಟಿದೆ.
ಗೋಮೂತ್ರದಲ್ಲಿ ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯಂ ಸಹಿತ ಕನಿಷ್ಠ 14 ಬಗೆಯ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದು ಪರೀಕ್ಷೆಗಳಿಂದ ತಿಳಿದುಬಂದಿದೆ. ಮಾನವರ ಹೊಟ್ಟೆ ನೋವಿಗೂ ಕೋಲಿ ಬ್ಯಾಕ್ಟೀರಿಯಾಕ್ಕೂ ಸಾಮಾನ್ಯವಾಗಿ ಸಂಬಂಧವಿರುತ್ತದೆ.
ಹಸು, ಎಮ್ಮೆ ಮತ್ತು ಮಾನವರ ಮೂತ್ರದ 73 ಸ್ಯಾಂಪಲ್ಗಳ ಅಂಕಿಸಂಖ್ಯಾ ವಿಶ್ಲೇಷಣೆ ನಡೆಸಿದಾಗ, ಎಮ್ಮೆ ಮೂತ್ರದಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯು ಹಸುಗಳಲ್ಲಿನದ್ದಕ್ಕಿಂತ ಹೆಚ್ಚು ಉತ್ತಮವಾಗಿರುವುದು ಕಂಡು ಬಂದಿದೆ. ಎಮ್ಮೆ ಮೂತ್ರವು ಎಸ್ಎಪರ್ವಿುಡಿಸ್ ಮತ್ತು ಇರ್ಹಾಪೊಂಟಿಸಿ ಮುಂತಾದ ಬ್ಯಾಕ್ಟೀರಿಯಾಗಳ ಮೇಲೆ ಹೆಚ್ಚು ಪರಿಣಾಮಕಾರಿ ಆಗಿರುವುದು ಪರೀಕ್ಷೆ ಗಳಿಂದ ದೃಢಪಟ್ಟಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಭೋಜ ರಾಜ್ ಸಿಂಗ್ ಹೇಳಿದ್ದಾರೆ.
ಸಂಸ್ಥೆಯ ಸಾಂಕ್ರಾಮಿಕರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸಿಂಗ್, 2022 ಜೂನ್ನಿಂದ ನವೆಂಬರ್ ನಡುವೆ ತಮ್ಮ ಮೂವರು ಪಿಎಚ್.ಡಿ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಸಂಶೋಧನೆ ನಡೆಸಿದ್ದರು. ಸ್ಥಳೀಯ ಡೇರಿ ಫಾರ್ಮ್ಗಳ ಸಹಿವಾಲ್, ಥಾರ್ಪರ್ಕರ್ ಮತ್ತು ವಿಂದವಾಣಿ (ಕ್ರಾಸ್ ಬ್ರೀಡ್) -ಈ ಮೂರು ಬಗೆಯ ಹಸುಗಳಲ್ಲಿ ಸಂಶೋಧನೆ ನಡೆಸಲಾಗಿತ್ತು. ಮಾನವರು ಮತ್ತು ಎಮ್ಮೆಗಳ ಮೂತ್ರವನ್ನು ಕೂಡ ಪರೀಕ್ಷೆಗೆ ಪರಿಗಣಿಸಲಾಗಿತ್ತು. 'ಆರೋಗ್ಯವಂತ ಮಾನವರ ಮೂತ್ರದ ಗಣನೀಯ ಪ್ರಮಾಣದ ಸ್ಯಾಂಪಲ್ನಲ್ಲಿ ಕೂಡ ರೋಗಕಾರಕ ಬ್ಯಾಕ್ಟೀರಿಯಾಗಳಿವೆ' ಎಂದು ಸಿಂಗ್ ವಿವರಿಸಿದ್ದಾರೆ.
ವ್ಯಾಪಕ ಭಾವನೆ: ತಾಜಾ ಗೋಮೂತ್ರಕ್ಕಿಂತ ಬಟ್ಟಿ ಇಳಿಸಿದ (ಡಿಸ್ಟಿಲ್ಡ್) ಗೋಮೂತ್ರದಲ್ಲಿ ಸೋಂಕುಕಾರಕ ಬ್ಯಾಕ್ಟೀರಿಯಾಗಳು ಇರುವುದಿಲ್ಲ ಎಂಬ ಭಾವನೆ ವ್ಯಾಪಕವಾಗಿದೆ. ಈ ವಿಚಾರದಲ್ಲಿ ಸಂಶೋಧನೆ ಮುಂದುವರಿದಿದೆ ಎಂದು ಸಿಂಗ್ ಹೇಳಿದ್ದಾರೆ. ಗೋಮೂತ್ರದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಅಂಶಗಳಿವೆ ಎಂದು ಸಾರ್ವತ್ರಿಕಗೊಳಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.