ಅಂಕಾರ : ಟರ್ಕಿಯ ಮೆಡಿಟರೇನಿಯನ್ ಕರಾವಳಿಯಲ್ಲಿ 14 ಸಿಬ್ಬಂದಿಗಳನ್ನು ಹೊತ್ತ ಗಿನಿಯಾ-ಬಿಸ್ಸಾವ್ ಸರಕು ಸಾಗಣೆ ಹಡಗು ಬುಧವಾರ ಮುಳುಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ಮಂದಿಯನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಒಂಬತ್ತು ಮಂದಿ ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರು ಸಿರಿಯಾ ಪ್ರಜೆಗಳು.
ಟರ್ಕಿಯ ಇಸ್ಕೆಂಡರನ್ ಬಂದರಿನಿಂದ ಉಕ್ರೇನ್‌ಗೆ ತೆರಳುತ್ತಿದ್ದ ಹಡಗು ಕುಂಲ್ಲುಲಾದ ಕರಾವಳಿಯಲ್ಲಿ ಮುಳುಗಿದೆ ಎಂದು ಗವರ್ನರ್ ಎರ್ಸಿನ್ ಯಾಜಿಸಿ ಅವರನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಅನಾಡೋಲು ಏಜೆನ್ಸಿ ವರದಿ ಮಾಡಿದೆ.
ಹಡಗು ಮುಳುಗಿರುವುದಕ್ಕೆ ಕಾರಣ ಏನೆಂದು ತಕ್ಷಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ.
'ಮುಂಜಾನೆ 3.47ಕ್ಕೆ ಹಡಗು ಅಪಾಯದಲ್ಲಿರುವ ಕರೆ ಬಂತು. ತಕ್ಷಣ ಹಡಗು, ಹಲವು ದೋಣಿಗಳು ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಯಿತು. ಐವರನ್ನು ರಕ್ಷಿಸಲಾಯಿತು' ಎಂದು ಟರ್ಕಿಯ ಕೋಸ್ಟ್ ಗಾರ್ಡ್ ಕಮಾಂಡ್ ತಿಳಿಸಿದೆ.