ಪೂಂಛ್: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ನಲ್ಲಿ ಗುರುವಾರ ಸೈನಿಕರ ಮೇಲೆ ನಡೆದ ದಾಳಿಯ ನಂತರ ಭದ್ರತಾ ಪಡೆಗಳು ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಬಟಾ-ಡೋರಿಯಾ ಪ್ರದೇಶದ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳು ಹುಡುಕಾಟ ನಡೆಸುತ್ತಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ನಡೆದ ದಾಳಿಯಲ್ಲಿ ಭಾರತೀಯ ಸೇನೆಯ ಐವರು ಸಿಬ್ಬಂದಿ ಮೃತಪಟ್ಟಿದ್ದರು. ಒಬ್ಬರು ಗಾಯಗೊಂಡಿದ್ದರು.
ಈ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಡ್ರೋನ್‌ಗಳು ಮತ್ತು ಶ್ವಾನಪಡೆಯನ್ನು ಬಳಸಲಾಗುತ್ತಿದೆ. ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಅವರು ಹೇಳಿದರು.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಹೀಗಾಗಿ ರಾಜೌರಿ ಮತ್ತು ಪೂಂಛ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ಭಿಂಬರ್ ಗಾಲಿ-ಪೂಂಛ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೆಂಧರ್ ಮೂಲಕ ಪೂಂಛ್‌ಗೆ ಹೋಗಲು ಜನರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ರಜೌರಿ ವಲಯದ ಬಿಂಬೇರ್ ಗಾಲಿ-ಪೂಂಛ್ ಮಾರ್ಗದಲ್ಲಿ ಗುರುವಾರ ಭಯೋತ್ಪಾದಕರು ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಸೇನಾ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಐವರು ಸೈನಿಕರು ಅಸುನೀಗಿದ್ದಾರೆ. ಮತ್ತೊಬ್ಬ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಯೋಧರೆಲ್ಲರೂ ರಾಷ್ಟ್ರೀಯ ರೈಫಲ್ಸ್ ಘಟಕಕ್ಕೆ ಸೇರಿದವರಾಗಿದ್ದಾರೆ. ಇವರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದರು ಎಂದು ಸೇನಾ ಪ್ರಕಟಣೆ ತಿಳಿಸಿದೆ.
ಎನ್‌ಐಎ ತಂಡವು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದೂ ಅಧಿಕಾರಿಗಳು ತಿಳಿಸಿದರು.